Thu. Mar 5th, 2026

ಮೆಟ್ರೋ ಎಂಡಿ ನೇಮಕದ ಅಧಿಕಾರ ಕೇಂದ್ರಕ್ಕೆ ಕೊಡ್ತೀರಾ: ಸಿಎಂ ಸಿದ್ದರಾಮಯ್ಯಗೆ ಆರ್. ಅಶೋಕ್ ಸವಾಲು

Share this with Friends

ಬೆಂಗಳೂರು: “ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ. ಒಂದು ವೇಳೆ ಕೇಂದ್ರದಿಂದಲೇ ದರ ಏರಿಕೆಯಾಗುತ್ತಿದ್ದರೆ, ಮುಂದಿನ 2 ವರ್ಷಗಳ ಕಾಲ ದರ ಏರಿಕೆ ಮಾಡಬಾರದು ಎಂದು ಪತ್ರ ಬರೆಯುವ ಧೈರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಯೇ?” ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಇಂದು ಖಡಕ್ ಸವಾಲು ಹಾಕಿದರು.

ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ದರ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು. ಮೆಟ್ರೋ ನಿಗಮದ (BMRCL) ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸುವುದು ಮತ್ತು ಸಾವಿರಾರು ಕೋಟಿ ರೂ.ಗಳ ಟೆಂಡರ್ ಅಂತಿಮಗೊಳಿಸುವುದು ರಾಜ್ಯ ಸರ್ಕಾರವೇ ಆಗಿದೆ. ದರ ನಿಗದಿ ಸಮಿತಿಯು (FFC) ತನ್ನ ವರದಿಯನ್ನು ರಾಜ್ಯ ಸರ್ಕಾರ ನೇಮಿಸಿದ ಎಂಡಿಗೇ ನೀಡಿದೆ ಹಾಗಾಗಿ ಕೇಂದ್ರಕ್ಕೆ ಇದರ ಯಾವುದೇ ಸಂಬಂಧವಿಲ್ಲ ಎಂದು  ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರಕ್ಕೆ ದರ ಏರಿಕೆಯ ಅಧಿಕಾರ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವುದಾದರೆ, ಇನ್ನು ಮುಂದೆ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸುವ ಅಧಿಕಾರವನ್ನು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ‌ ನೀಡಬೇಕು. ಟೆಂಡರ್‌ಗಳನ್ನು ಕರೆಯುವ ಹಾಗೂ ವರ್ಗಾವಣೆಯ ಅಧಿಕಾರವನ್ನು ಕೇಂದ್ರಕ್ಕೆ ನೀಡಬೇಕು‌ ಇದಕ್ಕೆ ರಾಜ್ಯ ಸರ್ಕಾರ ಸಿದ್ದವಿದೆಯೇ ಎಂದು ಸವಾಲೆಸೆದರು.

ಮೆಟ್ರೋ ದರ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗುತ್ತಿರುವುದನ್ನು ಗಮನಿಸಿ, ತಾವು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾಗಿ ತಿಳಿಸಿದ ಅಶೋಕ್,ಸಚಿವರ ಮಧ್ಯಸ್ಥಿಕೆಯಿಂದಾಗಿ ಸದ್ಯ ದರ ಏರಿಕೆಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ ಎಂದು ಹೇಳಿದರು.

ಆರ್ಥಿಕ ದಿವಾಳಿತನ: ರಾಜ್ಯದ ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲದೆ, ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ಅಶೋಕ್ ಲೇವಡಿ ಮಾಡಿದರು.

ಪಾರದರ್ಶಕತೆಗಾಗಿ ಸವಾಲು: ಸಿಎಂ ಕುರ್ಚಿ ಕಿತ್ತಾಟದ ನಡುವೆ ಆಡಳಿತ ಗೊಂದಲದ ಗೂಡಾಗಿದೆ. ಕಾಂಗ್ರೆಸ್‌ ಹೈಕಮಾಂಡ್‌ ದುರ್ಬಲವಾಗಿದ್ದು, ಇತ್ತ ಕಡೆ ಯಾರೂ ನೋಡುತ್ತಿಲ್ಲ. ನಿಗಮಗಳ ಅಧ್ಯಕ್ಷರಿಗೆ ಸಚಿವ ಸಂಪುಟ ಸ್ಥಾನಮಾನ ನೀಡುವ ಮೂಲಕ ಪ್ರತಿ ವರ್ಷ 40-50 ಕೋಟಿ ರೂ. ದುರ್ಬಳಕೆಯಾಗುತ್ತದೆ. “ರಾಜ್ಯ ಸರ್ಕಾರವು 134 ಶಾಸಕರಿದ್ದರೂ 149 ಜನರಿಗೆ ಸಂಪುಟ ದರ್ಜೆ ಸ್ಥಾನಗಳ ಭರವಸೆ ನೀಡಿ ಗೊಂದಲದಲ್ಲಿದೆ.ಗೃಹಲಕ್ಷ್ಮಿಯ ಎರಡು ತಿಂಗಳ, ಅನ್ನಭಾಗ್ಯದ ಒಂದು ತಿಂಗಳ ಹಣ ನೀಡಿಲ್ಲ. ಆದರೆ ಕಾಂಗ್ರೆಸ್‌ ಪಕ್ಷದ ಮೋಜು ಮಸ್ತಿಗೆ ಹಣ ನೀಡಲಾಗುತ್ತಿದೆ ಹಾಗಾಗಿ ಇಂತಹ ಸುಳ್ಳು ಹೇಳಿಕೆಗಳನ್ನು ಬಿಟ್ಟು, ಮೆಟ್ರೋ ದರ ಏರಿಕೆ ಮಾಡುವುದಿಲ್ಲ ಎಂದು ಅಧಿಕೃತವಾಗಿ ಕೇಂದ್ರಕ್ಕೆ ಪತ್ರ ಬರೆಯಲಿ” ಎಂದು ಆಗ್ರಹಿಸಿದರು.

ಪ್ರಧಾನಿ ಕರೆದ ಒಂದು ಸಭೆಗೂ ರಾಜ್ಯ ಸರ್ಕಾರದಿಂದ ಯಾರೂ ಹೋಗಿಲ್ಲ. ಜಿಎಸ್‌ಟಿಯಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂದಿದೆ, ರೈಲ್ವೆ, ಹೆದ್ದಾರಿ, ಇಂಧನ, ಗ್ರಾಮೀಣಾಭಿವೃದ್ಧಿ, ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ಎಷ್ಟು ಹಣ ಬಂದಿದೆ ಎಂದು ಶ್ವೇತಪತ್ರ ಹೊರಡಿಸಲಿ. ರೈಲು ಯೋಜನೆಗಳಲ್ಲಿ ಭೂ ಸ್ವಾಧೀನ ಮಾಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ, ಯೋಜನೆಗಳು ಮುಂದುವರಿಯುತ್ತಿಲ್ಲ. ಈ ಹಿಂದೆ ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಎಷ್ಟು ಹಣ ಬಂದಿದೆ ಎಂದು ಕೂಡ ತಿಳಿಸಲಿ. ಈ ಬಗ್ಗೆ ನಾನು ಹತ್ತು ಬಾರಿ ಕೇಳಿದ್ದರೂ ಮಾಹಿತಿ ನೀಡಿಲ್ಲ ಎಂದರು.

ಈಗಾಗಲೇ ರಾಜ್ಯದ ಸಾಲ 2 ಲಕ್ಷ ಕೋಟಿ ರೂ. ದಾಟಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2-3 ಸಾವಿರ ರೇಷನ್‌ ಕಾರ್ಡ್‌ಗಳು ರದ್ದಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಜಿಎಸ್‌ಟಿ ವಿಧಿಸಿ ಸೌಲಭ್ಯಗಳನ್ನು ಕಿತ್ತುಕೊಳ್ಳಲಾಗಿದೆ. ಮುಂದೆ ಇನ್ನಷ್ಟು ಯೋಜನೆಗಳು ಕಡಿತಗೊಳ್ಳಲಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಬಲಿಷ್ಠ ನಾಯಕರಾಗಿರುವುದರಿಂದ ಕಾಂಗ್ರೆಸ್‌ಗೆ ಭಯವಾಗಿದೆ. ಅಮೆರಿಕ ಜೊತೆಗಿನ ಸ್ನೇಹದಿಂದಲೂ ಕಾಂಗ್ರೆಸ್‌ ನಾಯಕರಿಗೆ ಹೆದರಿಕೆಯಾಗಿದೆ. ಇಲ್ಲಿ ಪೋಸ್ಟರ್‌ ಅಂಟಿಸುವ ಬದಲು ದೆಹಲಿಯಲ್ಲಿ ಅಂಟಿಸಲಿ ಎಂದರು.

 


Share this with Friends

Related Post