ಬೆಂಗಳೂರು: ರಾಜ್ಯದಲ್ಲಿ ಬಜೆಟ್ ಸಿದ್ಧತೆಗಳ ಅಬ್ಬರ ಜೋರಾಗಿರುವಾಗಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಠಾತ್ ದೆಹಲಿ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಬಜೆಟ್ ಪೂರ್ವಭಾವಿ ಸಭೆಗಳನ್ನು ಅರ್ಧಕ್ಕೇ ಬಿಟ್ಟು ಹೈಕಮಾಂಡ್ ಕರೆಗೆ ಓಗೊಟ್ಟು ಅವರು ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ.
ತಮ್ಮ ದೆಹಲಿ ಭೇಟಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ದೆಹಲಿಗೆ ಹೋಗುತ್ತಿರುವುದು ರಾಜಕಾರಣಕ್ಕಾಗಿಯೇ. ಹೈಕಮಾಂಡ್ ನಾಯಕರು ಕರೆದಿದ್ದಾರೆ, ಹಾಗಾಗಿ ಹೋಗುತ್ತಿದ್ದೇನೆ. ಮುಖ್ಯಮಂತ್ರಿಗಳಿಂದ ಅನುಮತಿ ಪಡೆದಿದ್ದೇನೆ,” ಎಂದು ಮಾರ್ಮಿಕವಾಗಿ ಉತ್ತರಿಸಿದರು. ನಾಯಕತ್ವ ಬದಲಾವಣೆ ಅಥವಾ ಸಂಘಟನಾತ್ಮಕ ಬದಲಾವಣೆ ಕುರಿತ ಪ್ರಶ್ನೆಗಳಿಗೆ, “ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ” ಎಂದು ಸಸ್ಪೆನ್ಸ್ ಉಳಿಸಿದ್ದಾರೆ.
6 ವರ್ಷಗಳ ಅಧಿಕಾರಾವಧಿ:
“ಕೆಪಿಸಿಸಿ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡು ಮಾರ್ಚ್ 10ಕ್ಕೆ ಆರು ವರ್ಷ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ,” ಎಂದು ಹೇಳುವ ಮೂಲಕ ಪರೋಕ್ಷವಾಗಿ ಪಕ್ಷದ ಮರುಸಂಘಟನೆಯ ಸುಳಿವು ನೀಡಿದ್ದಾರೆ.
ಅಧಿಕೃತ ಭೇಟಿ: ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿರುವ ಡಿಸಿಎಂ, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲಿದ್ದಾರೆ. ಅಲ್ಲದೆ, ಕಾನೂನು ತಜ್ಞರ ತಂಡದೊಂದಿಗೆ ಮಹತ್ವದ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.

