Sat. Mar 7th, 2026

ಮಂಡ್ಯದಲ್ಲಿ ಎಆರ್‌ಎಐ ಪರೀಕ್ಷಾ ಕೇಂದ್ರ: ಭೂಮಿ ನೀಡಲು ಸಿದ್ಧವೆಂದು ಕುಮಾರಸ್ವಾಮಿಗೆ ಎಂ.ಬಿ. ಪಾಟೀಲ್ ಪತ್ರ

Share this with Friends

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ದೇಶದ ಪ್ರಪ್ರಥಮ ನಿರ್ಮಾಣ ಕಾಮಗಾರಿ ಹಾಗೂ ಮೂಲಸೌಕರ್ಯ ಸಾಧನ ಪರೀಕ್ಷಾ ಕೇಂದ್ರ (ARAI) ಸ್ಥಾಪಿಸಲು ಪೂರಕವಾಗಿ 105 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಸಂಪೂರ್ಣ ಸಿದ್ಧವಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು, ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಅಗತ್ಯವಿರುವ ಜಂಟಿ ಸ್ಥಳ ಪರಿಶೀಲನೆಗೆ ಆಹ್ವಾನ ನೀಡಿದ್ದಾರೆ.

ಹೆಚ್ಚುವರಿ ಭೂಮಿ ಲಭ್ಯ: ಕೇಂದ್ರ ಸರ್ಕಾರವು ಈ ಯೋಜನೆಗಾಗಿ 100 ಎಕರೆ ಭೂಮಿಯನ್ನು ಕೋರಿತ್ತು. ಆದರೆ, ಸಚಿವ ಎಂ.ಬಿ. ಪಾಟೀಲ್ ಅವರು ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿ ಗ್ರಾಮಗಳಲ್ಲಿ ಲಭ್ಯವಿರುವ 105 ಎಕರೆ ಸರ್ಕಾರಿ ಜಮೀನನ್ನು ಒದಗಿಸಲು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಆಯಕಟ್ಟಿನ ಸ್ಥಳ: ಉದ್ದೇಶಿತ ಭೂಮಿಯು ಮಂಡ್ಯ-ನಾಗಮಂಗಲ ರಾಜ್ಯ ಹೆದ್ದಾರಿಗೆ ಕೇವಲ 500 ಮೀಟರ್ ಅಂತರದಲ್ಲಿದ್ದು, ಸಾರಿಗೆ ಸಂಪರ್ಕಕ್ಕೆ ಅತ್ಯಂತ ಸೂಕ್ತವಾಗಿದೆ‌ ಎಂದಿದ್ದಾರೆ.

ಬೃಹತ್ ಹೂಡಿಕೆ: ಸುಮಾರು ₹500 ಕೋಟಿ ವೆಚ್ಚದ ಈ ಯೋಜನೆಯು ಅತ್ಯಾಧುನಿಕ ಟೆಸ್ಟಿಂಗ್, ವ್ಯಾಲಿಡೇಶನ್ ಮತ್ತು ಪ್ರಮಾಣೀಕರಣ ಕೇಂದ್ರವಾಗಿರಲಿದೆ. ಇದು ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣ ಕ್ಷೇತ್ರಕ್ಕೆ ದೇಶದಲ್ಲೇ ಮೊದಲ ಸಮರ್ಪಿತ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದಿದ್ದಾರೆ.

ಜಂಟಿ ಪರಿಶೀಲನೆಗೆ ಆಹ್ವಾನ: ಕೇಂದ್ರ ಸಚಿವಾಲಯದ ತಂಡ ಹಾಗೂ ಎಆರ್‌ಎಐ (ARAI) ಪ್ರತಿನಿಧಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಭೂಮಿ ಪರಿಶೀಲನೆ ನಡೆಸಬೇಕು. ನಂತರ ಸಮಗ್ರ ಯೋಜನಾ ವರದಿ (DPR) ಪಡೆದು ಭೂಮಿಯನ್ನು ಅಧಿಕೃತವಾಗಿ ಹಂಚಿಕೆ ಮಾಡಲಾಗುವುದು ಎಂದು ಪಾಟೀಲ್ ಪತ್ರದಲ್ಲಿ ವಿವರಿಸಿದ್ದಾರೆ.

“ಈ ಕೇಂದ್ರವು ಮಂಡ್ಯ ಜಿಲ್ಲೆಯ ಕೈಗಾರಿಕಾ ವಿಕಾಸದಲ್ಲಿ ಪ್ರಮುಖ ಮೈಲಿಗಲ್ಲಾಗಲಿದ್ದು, ರಾಜ್ಯದ ಉತ್ಪಾದನಾ ಶಕ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಿದೆ” ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 


Share this with Friends

Related Post