Sat. Mar 7th, 2026

ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ಭಾಟಿಯಾ ರಾಯಭಾರಿ: ಕೆಎಸ್‌ಡಿಎಲ್‌ನಿಂದ 57 ನೂತನ ಉತ್ಪನ್ನಗಳ ಬಿಡುಗಡೆ

Share this with Friends

ಬೆಂಗಳೂರು: ಲೇಸರ್ ಬೆಳಕಿನ ಝಗಮಗ, ಮೈಸೂರು ಸಿಲ್ಕ್ ಸೀರೆಯುಟ್ಟು ಮಿಂಚಿದ ನಟಿ ತಮನ್ನಾ ಭಾಟಿಯಾ, ಮತ್ತು ಶತಮಾನದ ಇತಿಹಾಸವಿರುವ ಮೈಸೂರು ಸ್ಯಾಂಡಲ್ ಸೋಪ್‌ – ಇವೆಲ್ಲವೂ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಕೆಎಸ್‌ಡಿಎಲ್‌ನ (KSDL) ಹೊಸ ಅಧ್ಯಾಯಕ್ಕೆ ಸಾಕ್ಷಿಯಾದವು.

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌ನ (ಕೆಎಸ್‌ಡಿಎಲ್) ನೂತನ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ತಮನ್ನಾ ಭಾಟಿಯಾ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಸಚಿವ ಎಂ.ಬಿ. ಪಾಟೀಲ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್. ನಾಡಗೌಡ ಅವರ ಸಮ್ಮುಖದಲ್ಲಿ ಈ ನೇಮಕ ಪ್ರಕಟಿಸಲಾಯಿತು.

ತಮನ್ನಾ ಶ್ಲಾಘನೆ:

“ಮೈಸೂರು ಸ್ಯಾಂಡಲ್ ಸೋಪು ಕೇವಲ ಸಾಬೂನಲ್ಲ, ಅದೊಂದು ಭಾವನೆ. ಇದರೊಂದಿಗೆ ನಮ್ಮ ಬಾಲ್ಯದ ಸವಿನೆನಪುಗಳು ಹೆಣೆದುಕೊಂಡಿವೆ,” ಎಂದು ಬಹುಭಾಷಾ ನಟಿ ತಮನ್ನಾ ಭಾಟಿಯಾ ಬಣ್ಣಿಸಿದರು.

ಮುಂದಿನ ಎರಡು ವರ್ಷಗಳ ಕಾಲ ಸಂಸ್ಥೆಯ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿರುವ ತಮನ್ನಾ, ಮಾರುಕಟ್ಟೆಯಲ್ಲಿ ಮೈಸೂರು ಸ್ಯಾಂಡಲ್‌ಗೆ ಸಾಟಿಯಾದ ಮತ್ತೊಂದು ಉತ್ಪನ್ನವಿಲ್ಲ ಎಂದು ಶ್ಲಾಘಿಸಿದರು.

ಐಷಾರಾಮಿ ಮಲ್ಲಿಗೆ ಸೋಪು ಮತ್ತು ಜಾಗತಿಕ ಮಾರುಕಟ್ಟೆ:

ಕಾರ್ಯಕ್ರಮದಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, “ಸಂಸ್ಥೆಯು ಈಗ ಕೇವಲ ಗಂಧದ ಸೋಪಿಗೆ ಸೀಮಿತವಾಗಿಲ್ಲ. ಲೀಟರಿಗೆ 4 ಲಕ್ಷ ರೂ. ಬೆಲೆಬಾಳುವ ಮಲ್ಲಿಗೆ ತೈಲ ಬಳಸಿ ತಯಾರಿಸಿದ ಐಷಾರಾಮಿ ಸೋಪನ್ನು 400 ರೂ.ಗೆ ಪರಿಚಯಿಸುತ್ತಿದ್ದೇವೆ. ಯುರೋಪ್ ಮಾರುಕಟ್ಟೆಯಲ್ಲಿ ಇದಕ್ಕೆ ಭಾರಿ ಬೇಡಿಕೆಯಿದೆ,” ಎಂದರು. ರಫ್ತು ಪ್ರಮಾಣವನ್ನು ಹೆಚ್ಚಿಸಲು ಸಿದ್ಧಪಡಿಸಿರುವ ನೀಲನಕ್ಷೆಯ ಭಾಗವಾಗಿ ‘ಮಹಾರಾಜ’ ಮತ್ತು ‘ಮಹಾರಾಣಿ’ ಸರಣಿಯ ಉತ್ಪನ್ನಗಳನ್ನು ಲಾಂಚ್ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

500 ಕೋಟಿ ಲಾಭದ ಗುರಿ:

ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್. ನಾಡಗೌಡ ಮಾತನಾಡಿ, “ಈ ಸಾಲಿನಲ್ಲಿ ಸಂಸ್ಥೆಯ ವಹಿವಾಟು 2,000 ಕೋಟಿ ರೂ. ತಲುಪುವ ನಿರೀಕ್ಷೆಯಿದ್ದು, 500 ಕೋಟಿ ರೂ. ಲಾಭ ಗಳಿಸುವ ಗುರಿ ಹೊಂದಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ 3 ಕೋಟಿಗೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ತಮನ್ನಾ ಅವರ ವರ್ಚಸ್ಸು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಗಂಧ ದ್ರವ್ಯ ವಲಯ ಪ್ರವೇಶಿಸಲು ಸಂಸ್ಥೆಯು ಈಗಾಗಲೇ ಕೊಯಮತ್ತೂರು ಮತ್ತು ಕನೌಜ್ ಮೂಲದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದರು.


Share this with Friends

Related Post