ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿರುವುದು ಈಗ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. “ವಿಧಾನಸೌಧದಲ್ಲಿ 300 ಗ್ರಾಂ ಚಿನ್ನ ಸಿಕ್ಕಿರುವುದು ಲಂಚಾವತಾರ ಮತ್ತು ಭ್ರಷ್ಟಾಚಾರದ ಪರಮಾವಧಿ” ಎಂದು ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಣದ ಬದಲಿಗೆ ಬಂಗಾರವನ್ನು ಲಂಚವಾಗಿ ನೀಡಲು ತರಲಾಗುತ್ತಿತ್ತೇ? 1.5 ಲಕ್ಷ ನಗದು ಮತ್ತು ಈ ಚಿನ್ನವನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು? ಈ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್ ಅಥವಾ ಬೇರೆ ಯಾರೇ ಭಾಗಿಯಾಗಿದ್ದರೂ ತಕ್ಷಣ ತನಿಖೆಯಾಗಲಿ. ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು,” ಎಂದು ಆಗ್ರಹಿಸಿದರು.
ಶಾಸಕರ ವಿದೇಶ ಪ್ರವಾಸ: ಸಿಎಂ ಪಟ್ಟಕ್ಕಾಗಿ ಕಸರತ್ತೇ?
ಇದೇ ವೇಳೆ ಶಾಸಕರ ವಿದೇಶ ಪ್ರವಾಸದ ಬಗ್ಗೆಯೂ ವ್ಯಂಗ್ಯವಾಡಿದ ರವಿಕುಮಾರ್, “ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಬಣದ ಶಾಸಕರು ಗುಂಪು ಗುಂಪಾಗಿ ವಿದೇಶಕ್ಕೆ ಹೋಗುತ್ತಿರುವುದು ಕುತೂಹಲ ಮೂಡಿಸಿದೆ. ಇದು ಬಜೆಟ್ ಅಧಿವೇಶನದ ನಂತರ ಸಿಎಂ ಬದಲಾವಣೆಯ ತಂತ್ರವೇ? ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದು, ಕೇವಲ ಅಧಿಕಾರಕ್ಕಾಗಿ ಶಾಸಕರ ಸಂಖ್ಯೆ ಕ್ರೋಢೀಕರಿಸುವ ಕೆಲಸ ನಡೆಯುತ್ತಿದೆ,” ಎಂದು ಟೀಕಿಸಿದರು.
ವಂದೇ ಮಾತರಂಗೆ ಗೌರವ: ಬಿಜೆಪಿಯಿಂದ ಹರ್ಷ
ಇನ್ನೊಂದೆಡೆ, ರಾಷ್ಟ್ರಗೀತೆ ‘ಜನಗಣಮನ’ಕ್ಕೆ ಸರಿಸಮಾನವಾಗಿ ‘ವಂದೇ ಮಾತರಂ’ಗೆ ಗೌರವ ನೀಡುವ ಕೇಂದ್ರ ಸರ್ಕಾರದ ಆದೇಶವನ್ನು ಬಿಜೆಪಿ ಸ್ವಾಗತಿಸಿದೆ. “ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇದು ದೇಶಪ್ರೇಮಿಗಳಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂದ ಗೌರವ,” ಎಂದು ರವಿಕುಮಾರ್ ಶ್ಲಾಘಿಸಿದರು

