Fri. Mar 6th, 2026

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆಗೆ ಸಿದ್ಧತೆ: ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಮಹತ್ವದ ಸಭೆ

Share this with Friends

ಬೆಂಗಳೂರು: ಕಳೆದ ವರ್ಷ ನಡೆದ ಅಹಿತಕರ ಘಟನೆಯ ಬಳಿಕ ನಿರ್ಬಂಧಕ್ಕೊಳಗಾಗಿದ್ದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಚರ್ಚಿಸಿದರು.

ಕಳೆದ ಜೂನ್‌ನಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ದುರಂತದ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಸಮಿತಿ ನೀಡಿದ್ದ ಸುರಕ್ಷತಾ ಕ್ರಮಗಳ ವರದಿಯ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕ್ರೀಡಾಂಗಣದ ಪ್ರವೇಶ ದ್ವಾರಗಳ ವಿಸ್ತರಣೆ, ತುರ್ತು ನಿರ್ಗಮನ ದಾರಿಗಳು ಮತ್ತು ಪ್ರೇಕ್ಷಕರ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಗೃಹ ಸಚಿವರು ಮಾಹಿತಿ ಪಡೆದರು.

ಐಪಿಎಲ್ 2026ರ ಮೇಲೆ ಕಣ್ಣು:

ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಪದಾಧಿಕಾರಿಗಳು, ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಬಳಕೆಗೆ ಶೀಘ್ರವಾಗಿ ಅನುಮತಿ ನೀಡಬೇಕೆಂದು ಮನವಿ ಮಾಡಿದರು. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಪ್ರತಿನಿಧಿಗಳು ಸಭೆಯಲ್ಲಿದ್ದರು.

ಸಚಿವ ಸಂಪುಟದ ನಿರ್ಧಾರ ಅಂತಿಮ:

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, “ಕುನ್ಹಾ ಸಮಿತಿಯ ಶಿಫಾರಸುಗಳ ಪಾಲನೆಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ನೀಡಿರುವ ವರದಿಯನ್ನು ಆಧರಿಸಿ, ಇಂದು ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು,” ಎಂದು ತಿಳಿಸಿದರು.

ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ನಗರ ಪೊಲೀಸ್ ಆಯುಕ್ತರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು


Share this with Friends

Related Post