ನವದೆಹಲಿ: ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಕುರಿತು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ವದಂತಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಇಲ್ಲಿ ತೆರೆ ಎಳೆದಿದ್ದಾರೆ. ಎಐಸಿಸಿ (AICC) ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜಕೀಯದಲ್ಲಿ ಸಹನೆ ಅಥವಾ ತಾಳ್ಮೆ ಎನ್ನುವುದು ಬಹಳ ಮುಖ್ಯ. ತಾಳ್ಮೆಯಿಂದ ಕಾಯುವವರಿಗೂ ರಾಜಕೀಯದಲ್ಲಿ ಸಿಹಿ ಫಲ ಸಿಗಲಿದೆ” ಎಂದು ಹೇಳುವ ಮೂಲಕ ಅಧಿಕಾರ ಹಸ್ತಾಂತರದ ನಿರೀಕ್ಷೆಯಲ್ಲಿರುವ ಬೆಂಬಲಿಗರಿಗೆ ಮಾರ್ಮಿಕ ಸಂದೇಶ ನೀಡಿದ್ದಾರೆ.
ವದಂತಿಗಳಿಗೆ ತಿರುಗೇಟು:
“ನಾನು ದೆಹಲಿಗೆ ಬಂದಿರುವುದು ಕೇವಲ ಗಾಳಿ ಸೇವಿಸಲಿಕ್ಕಲ್ಲ. ಪಕ್ಷದ ಆಂತರಿಕ ವಿಚಾರಗಳು ಹಾಗೂ ರಾಜ್ಯದ ನೀರಾವರಿ ಯೋಜನೆಗಳ ಕಾನೂನು ತೊಡಕುಗಳ ಬಗ್ಗೆ ಹಿರಿಯ ನಾಯಕರೊಂದಿಗೆ ಚರ್ಚಿಸಲು ಬಂದಿದ್ದೇನೆ” ಎಂದು ತಮ್ಮ ಪ್ರವಾಸದ ಉದ್ದೇಶವನ್ನು ವಿವರಿಸಿದರು. ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ಶೀತಲ ಸಮರ ಇಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಹೈಕಮಾಂಡ್ ನಿರ್ಧಾರವೇ ಅಂತಿಮ:
ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ಭೇಟಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಹೈಕಮಾಂಡ್ ನಾಯಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ಅವರೇ ಕೈಗೊಳ್ಳಲಿದ್ದಾರೆ. ಅಲ್ಲಿಯವರೆಗೆ ಊಹಾಪೋಹಗಳಿಗೆ ಕಿವಿಗೊಡಬೇಡಿ” ಎಂದರು.
ಅಸ್ಸಾಂ ಚುನಾವಣೆ ಜವಾಬ್ದಾರಿ: ಎಐಸಿಸಿ (AICC) ಸಭೆಯ ನಂತರ ಮಾತನಾಡಿದ ಅವರು, ಕೇವಲ ಕರ್ನಾಟಕದ ರಾಜಕೀಯವಲ್ಲದೆ, ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿಸಿದರು. ಅಸ್ಸಾಂನಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಕಾಂಗ್ರೆಸ್ ಜಯಗಳಿಸುವ ವಿಶ್ವಾಸವಿದೆ ಎಂದರು.
ಶಾಸಕರ ವಿದೇಶ ಪ್ರವಾಸ: ಕೆಲವು ಶಾಸಕರು ಫೆಬ್ರವರಿ 16 ರಿಂದ ಮಾರ್ಚ್ 3 ರವರೆಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ಗೆ ಪ್ರವಾಸ ಹೋಗುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರೊಂದಿಗೆ ಒಮ್ಮತ: “ಮುಖ್ಯಮಂತ್ರಿಗಳು ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರ ನಡುವೆ ನಡೆದ ಚರ್ಚೆಗಳು ಗೌಪ್ಯವಾಗಿಲ್ಲ, ಎಲ್ಲವೂ ಹೈಕಮಾಂಡ್ ಗಮನಕ್ಕೆ ಇದೆ” ಎಂದು ಹೇಳಿದರು.
ಅಭಿವೃದ್ಧಿ ಯೋಜನೆಗಳ ಚರ್ಚೆ: ತಮ್ಮ ದೆಹಲಿ ಭೇಟಿಯ ವೇಳೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿ ರಾಜ್ಯದ ನೀರಾವರಿ ಯೋಜನೆಗಳು ಹಾಗೂ ಮೆಕೇದಾಟು ಯೋಜನೆಯ ಕಾನೂನು ತೊಡಕುಗಳ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.
ಬಿಜೆಪಿ ಟೀಕೆಗೆ ಉತ್ತರ: ಸಿಎಂ ಸ್ಥಾನಕ್ಕಾಗಿ ‘ಹಳೆಯ ಕಾಂಗ್ರೆಸ್ ವರ್ಸಸ್ ಹೊಸ ಕಾಂಗ್ರೆಸ್’ ನಡುವೆ ಹೋರಾಟ ನಡೆಯುತ್ತಿದೆ ಎಂಬ ಆರ್. ಅಶೋಕ್ ಅವರ ಹೇಳಿಕೆಯನ್ನು ತಳ್ಳಿಹಾಕಿದ ಅವರು, ಇದು ಬಿಜೆಪಿಯ ಸೃಷ್ಟಿ ಎಂದು ಟೀಕಿಸಿದರು.

