ಹಾವೇರಿ: ಸರ್ಕಾರ 1,000 ದಿನಗಳನ್ನು ಪೂರೈಸಿರುವುದು ಕೇವಲ ಒಂದು ಮೈಲಿಗಲ್ಲಲ್ಲ, ಇದು ಬಡವರು, ದಲಿತರು ಮತ್ತು ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಪಯಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳು ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ‘ಸಾಧನಾ ಸಮಾವೇಶ’ ಹಾಗೂ ‘ಭೂಮಿ ಗ್ಯಾರಂಟಿ ಸಮರ್ಪಣಾ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಪ್ರಗತಿ ಗಾಥೆಯನ್ನು ತೆರೆದಿಟ್ಟರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, “ನಾವು ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಒಟ್ಟು 592 ಭರವಸೆಗಳಲ್ಲಿ ಈಗಾಗಲೇ 243 ಭರವಸೆಗಳನ್ನು ಪೂರ್ಣಗೊಳಿಸಿದ್ದೇವೆ. ನುಡಿದಂತೆ ನಡೆಯುವುದು ನಮ್ಮ ಸರ್ಕಾರದ ಮೂಲ ಮಂತ್ರ. ಈ ಸಾವಿರ ದಿನಗಳು ಕೇವಲ ಅಂಕಿ-ಅಂಶಗಳಲ್ಲ, ಬದಲಿಗೆ ರಾಜ್ಯದ ಬಡವರ ಬದುಕಿನಲ್ಲಿ ತಂದ ಬದಲಾವಣೆಯ ಪ್ರತಿಬಿಂಬ” ಎಂದು ತಿಳಿಸಿದರು.
ಐತಿಹಾಸಿಕ ‘ಭೂಮಿ ಗ್ಯಾರಂಟಿ’ ಜಾರಿ:
ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ದಾಖಲೆ ನಿರ್ಮಿಸಿದ್ದೇವೆ. ಈ ಸಮಾವೇಶದ ಪ್ರಮುಖ ಮೈಲಿಗಲ್ಲಾಗಿ ರಾಜ್ಯದ ಸುಮಾರು 1.1 ಲಕ್ಷ ಭೂರಹಿತ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಲಂಬಾಣಿ ತಾಂಡಾ, ಹಟ್ಟಿ, ಹಾಡಿ ಹಾಗೂ ಪಾಳ್ಯಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ, ಅಲ್ಲಿನ ನಿವಾಸಿಗಳಿಗೆ ಮಾಲೀಕತ್ವದ ಹಕ್ಕು ನೀಡುವ ಮೂಲಕ ಸರ್ಕಾರ ಸಾಮಾಜಿಕ ಕ್ರಾಂತಿ ಮಾಡಿದೆ ಎಂದರು.
ಪಂಚ ಗ್ಯಾರಂಟಿಗಳ ಯಶಸ್ಸು:
ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ರಾಜ್ಯದ ಪ್ರತಿಯೊಂದು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿವೆ. ಕೇಂದ್ರದ ಆಸಹಕಾರದ ನಡುವೆಯೂ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲಿಗೆ ಹಣ ನೀಡುವ ಮೂಲಕ ಬಡವರ ಹಸಿವು ನೀಗಿಸಿದ್ದೇವೆ. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣವು ಅವರ ಆರ್ಥಿಕ ಸ್ವಾತಂತ್ರ್ಯಕ್ಕೆ ಬಲ ನೀಡಿದೆ ಎಂದು ಅವರು ಪ್ರತಿಪಾದಿಸಿದರು.
ವಿರೋಧ ಪಕ್ಷಗಳಿಗೆ ತಿರುಗೇಟು:
ಕೇಂದ್ರ ಸರ್ಕಾರ, ರಾಜ್ಯಕ್ಕೆ ಅನ್ಯಾಯ ಮಾಡಿದೆ. ಜಿಎಸ್ ಟಿ ಸಂಗ್ರಹಣೆಯಲ್ಲಿ ಕೊರತೆಯಾಗಿದ್ದು, ರಾಜ್ಯಕ್ಕೆ 12 – 15 ಸಾವಿರ ಕೋಟಿ ನಷ್ಟವಾಗಿದೆ. ನಮಗೆ ಬರುವ ನ್ಯಾಯಯುತ ಪಾಲು ಸಿಗುತ್ತಿಲ್ಲ. ಜೆಜೆಎಂ ನಲ್ಲಿ 15 ಸಾವಿರ ಕೋಟಿ ಇನ್ನೂ ಕೊಟ್ಟಿಲ್ಲ. ಈ ಅನುದಾನ ನೀಡಿದರೆ, ರಾಜ್ಯದ ಬಹಳಷ್ಟು ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತವೆ ಎಂದರು.
“ಬಿಜೆಪಿ ಅಧಿಕಾರದಲ್ಲಿದ್ದಾಗ ಶೇ.10ರಷ್ಟು ಭರವಸೆಗಳನ್ನೂ ಈಡೇರಿಸಿರಲಿಲ್ಲ. ಈಗ ನಮ್ಮ ಜನಪ್ರಿಯ ಯೋಜನೆಗಳನ್ನು ಕಂಡು ಅಸೂಯೆಯಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಹಿಂದೆ 4 ವರ್ಷ ಏನು ಮಾಡದೆ ಈಗ ಅವರು ಜನರನ್ನು ತಪ್ಪು ದಾರಿಗೆಳೆಯುವುದು ಖಂಡನೀಯ. ಬಿಜೆಪಿಯವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಜನರ ಆಶೀರ್ವಾದವಿರುವವರೆಗೆ ಇಂತಹ ಟೀಕೆಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಮುಂದಿನ ಸಾವಿರ ದಿನಗಳ ಗುರಿ:
ಜಲ ಜೀವನ್: ರಾಜ್ಯದ ಪ್ರತಿ ಮನೆಗೂ ಪೈಪ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ.
ಕೌಶಲ ಕರ್ನಾಟಕ: ಪ್ರತಿ ತಾಲೂಕನ್ನು ‘ಸ್ಕಿಲ್ ಡಿಸ್ಟ್ರಿಕ್ಟ್’ ಆಗಿ ಪರಿವರ್ತಿಸಿ ಯುವಕರಿಗೆ ಉದ್ಯೋಗಾವಕಾಶ.
ಹಸಿರು ಕ್ರಾಂತಿ: ಸಾವಯವ ಕೃಷಿ ಪ್ರದೇಶವನ್ನು ದ್ವಿಗುಣಗೊಳಿಸಿ ರೈತರ ಆದಾಯ ಹೆಚ್ಚಳ.
ಇ-ವಾಹನ ರಾಜಧಾನಿ: ಕರ್ನಾಟಕವನ್ನು ಏಷ್ಯಾದ ಎಲೆಕ್ಟ್ರಿಕ್ ವಾಹನಗಳ ಹಬ್ ಆಗಿ ರೂಪಿಸುವುದು.
ಹಾವೇರಿಯ ಹೊರವಲಯದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಜನಸ್ತೋಮ ಸೇರಿತ್ತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯ ನಾಯಕರು ಉಪಸ್ಥಿತರಿದ್ದರು

