Fri. Mar 6th, 2026

ಗೋ ಬ್ಯಾಕ್’ ಎನ್ನುವವವ್ರಿಗೆ ಜಗ್ಗುವ ಮಗ ಈ ಶಿವಕುಮಾರ್ ಅಲ್ಲ: ಘೋಷಣೆ ಕೂಗಿದವರಿಗೆ ಡಿಕೆಶಿ ತಿರುಗೇಟು

Share this with Friends

ನ್ಯಾಮತಿ (ದಾವಣಗೆರೆ): ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸಿ ಪ್ರತಿಭಟನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಂತಹ ನೂರು ಜನರು ಬಂದು ‘ಗೋ ಬ್ಯಾಕ್’ ಎಂದು ಕೂಗಿದರೂ ಜಗ್ಗುವ ವ್ಯಕ್ತಿ ಈ ಡಿ.ಕೆ. ಶಿವಕುಮಾರ್ ಅಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.

ಶನಿವಾರ ತಾಲೂಕಿನ ಭಾಯಗಡ್-ಸೊರಗೊಂಡನಕೊಪ್ಪದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಅವರ 287ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ, ತಮಗೆ ಕಪ್ಪು ಬಾವುಟ ಪ್ರದರ್ಶಿಸಿ ‘ಗೋ ಬ್ಯಾಕ್’ ಘೋಷಣೆ ಕೂಗಿದ ಯುವಕರ ಗುಂಪಿಗೆ ಅವರು ವೇದಿಕೆಯಲ್ಲೇ ಕೌಂಟರ್ ನೀಡಿದರು.

“ಕೆಲವು ಯುವಕರು ಉತ್ಸಾಹದಿಂದ ಗೋಬ್ಯಾಕ್ ಎನ್ನುತ್ತಿದ್ದೀರಿ. ನಿಮ್ಮ ಈ ಘೋಷಣೆಯನ್ನು ನಾನು ಪ್ರೀತಿಯಿಂದಲೇ ಸ್ವೀಕರಿಸುತ್ತೇನೆ. ಆದರೆ, ನಿಮ್ಮ ನಾಯಕರಾದ ಮಾಜಿ ಶಾಸಕ ಮಾಡಾಳ್ ರಾಜು, ರೇಣುಕಾಚಾರ್ಯ ಹಾಗೂ ರಾಘವೇಂದ್ರ ಅವರು ‘ಡಿ.ಕೆ. ವೆಲ್ ಕಮ್’ ಎಂದು ಆತ್ಮೀಯವಾಗಿ ಕರೆದಿದ್ದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ. ಇಲ್ಲಿರುವ ಸಾವಿರಾರು ಜನರಿಗೆ ನನ್ನ ತತ್ವ ಮತ್ತು ಸಿದ್ಧಾಂತ ಗೊತ್ತಿದೆ. ಅಂಬೇಡ್ಕರ್ ಅವರು ಹೇಳಿದಂತೆ ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ” ಎಂದು ಅವರು ಮಾರ್ಮಿಕವಾಗಿ ನುಡಿದರು.

ಧರ್ಮದಲ್ಲಿ ರಾಜಕಾರಣ ಬೇಡ:

ರಾಜಕಾರಣ ಮಾಡಲು ಹಲವು ದಾರಿಗಳಿವೆ. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂಬುದು ನನ್ನ ನಿಷ್ಠುರ ನಿಲುವು. ಲಂಬಾಣಿ ಸಮುದಾಯದವರ ಹೃದಯದಲ್ಲಿ ಕಾಂಗ್ರೆಸ್ ನಾಯಕರಿದ್ದೇವೆ. ಕನಕಪುರದಲ್ಲಿ ನಾನು ಸ್ಪರ್ಧಿಸಿದಾಗ ಲಂಬಾಣಿ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರು ನೀಡಿದ 1.23 ಲಕ್ಷ ಮತಗಳ ಬೆಂಬಲವೇ ನನ್ನ ಇತಿಹಾಸ. ಆ ಪ್ರೀತಿ ಮತ್ತು ವಿಶ್ವಾಸದ ನಂಟಿನಿಂದ ನಾನು ಇಂದು ನಿಮ್ಮ ಮುಂದೆ ನಿಂತಿದ್ದೇನೆ ಎಂದು ತಿಳಿಸಿದರು.

ನ್ಯಾಯ ಒದಗಿಸುವ ಭರವಸೆ:

“ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಈಗ ಸಮುದಾಯದ ಬದುಕಿಗೆ ನ್ಯಾಯ ಒದಗಿಸುವ ಕೆಲಸ ಮಾಡೋಣ. ಗೋಬ್ಯಾಕ್ ಎನ್ನುವವರಿಗಿಂತ ಕಮ್ ಬ್ಯಾಕ್ ಎನ್ನುವವರ ಸಂಖ್ಯೆಯೇ ಹೆಚ್ಚಾಗಿದೆ. ನಾವು ಎಂದಿಗೂ ನಿಮ್ಮ ಪರವಾಗಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ” ಎಂದು ಪ್ರತಿಭಟನಾಕಾರರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ವೈದ್ಯ, ಬೋಸರಾಜು, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು


Share this with Friends

Related Post