ಬೆಂಗಳೂರು: ಕೇಂದ್ರ ಸಚಿವ ಸಂಪುಟದಲ್ಲಿರುವ ರಾಜ್ಯದ ಹಿರಿಯ ನಾಯಕ ಹೆಚ್.ಡಿ ಕುಮಾರಸ್ವಾಮಿ ಅವರು ಪುನಃ ರಾಜ್ಯ ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನಿಲ್ಲ ಆದರೆ ಈಗಲೇ ಮುಖ್ಯಮಂತ್ರಿ ಸ್ಥಾನದ ಚರ್ಚೆ ಅಪ್ರಸ್ತುತ ಸಮಯ ಬಂದಾಗ ಅದನ್ನು ಉಭಯ ಪಕ್ಷಗಳ ವರಿಷ್ಠ ನಾಯಕರು ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ ಕರ್ನಾಟಕದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಪುನಃ ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರತಿಯೊಬ್ಬ ನಾಯಕನಿಗೂ ತಮ್ಮದೇ ಆದ ರಾಜಕೀಯ ಆಕಾಂಕ್ಷೆಗಳಿರುವುದು ಸಹಜ ಎಂದು ಸಮರ್ಥಿಸಿಕೊಂಡರು.
ಸಿಎಂ ಸ್ಥಾನದ ಗೊಂದಲಕ್ಕೆ ತೆರೆ: ಮೈತ್ರಿಕೂಟದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಈಗಲೇ ಚರ್ಚೆ ಮಾಡುವುದು ಅಪ್ರಸ್ತುತ. ನಮ್ಮ ಮೊದಲ ಗುರಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮತ್ತು ಮುಂದಿನ ಚುನಾವಣೆಯಲ್ಲಿ 113ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು. ಅಂತಿಮವಾಗಿ ಸಿಎಂ ಯಾರಾಗಬೇಕು ಎಂಬುದನ್ನು ಬಿಜೆಪಿ ಮತ್ತು ಜೆಡಿಎಸ್‌ನ ರಾಷ್ಟ್ರೀಯ ನಾಯಕರು ಕುಳಿತು ತೀರ್ಮಾನಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಿಡಿ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಗರಣಗಳ ಸುಳಿಯಲ್ಲಿ ಸಿಲುಕಿದೆ. ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿಗಳು ಪ್ರಯತ್ನಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಮೈತ್ರಿ ಪಕ್ಷಗಳಾದ ನಾವು ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಡಬೇಕಿದೆ ಎಂದು ಕರೆ ನೀಡಿದರು.
ಅನುದಾನ ದುರುಪಯೋಗದ ಆರೋಪ: ಕೇಂದ್ರ ಸರ್ಕಾರ ನೀಡುವ ಅಭಿವೃದ್ಧಿ ಅನುದಾನವನ್ನು ರಾಜ್ಯ ಸರ್ಕಾರವು ಸರಿಯಾಗಿ ಬಳಸದೆ, ಸುಳ್ಳು ಬಳಕೆ ಪ್ರಮಾಣಪತ್ರಗಳನ್ನು (UC) ನೀಡುತ್ತಿದೆ ಎಂದು ದಾಖಲೆಗಳ ಸಮೇತ ಆರೋಪಿಸಿದರು. ರಾಜ್ಯದ ಅಭಿವೃದ್ಧಿಗಿಂತ ಹೆಚ್ಚಾಗಿ ಕಾಂಗ್ರೆಸ್ ನಾಯಕರು ಅಧಿಕಾರ ಉಳಿಸಿಕೊಳ್ಳಲು ದೆಹಲಿ ಮಟ್ಟದಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಸಿಎಂ ರಾಜೀನಾಮೆ ಕುರಿತು ಸೂಕ್ಷ್ಮವಾಗಿ ತಿಳಿಸಿದ ಸುಪುತ್ರ:
ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಅವರು ಶಿವರಾತ್ರಿ ಕಳೆದ ಮೇಲೆ ಡಿಕೆ ಶಿವಕುಮಾರ್ ಅವರಿಗೂ ಒಳ್ಳೆಯದಾಗಲಿದೆ; ಎಲ್ಲರಿಗೂ ಒಳ್ಳೆಯದಾಗಲಿದೆ ಎಂದಿದ್ದಾರೆ ಎಂದರಲ್ಲದೇ, ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ ಎಂದು ಅವರು ಹೇಳಿಲ್ಲ ಎಂದು ಟೀಕಿಸಿದರು. ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದನ್ನು ಬಹಳ ಸೂಕ್ಷ್ಮವಾಗಿ ಮುಖ್ಯಮಂತ್ರಿಯ ಸುಪುತ್ರರು ಬಿಚ್ಚಿಟ್ಟಿದ್ದಾರೆ ಎಂದು ವಿಶ್ಲೇಷಿಸಿದರು. ಮುಖ್ಯಮಂತ್ರಿ ರಾಜೀನಾಮೆ ಕೊಟ್ಟರೆ ತಾವು ಕ್ಯಾಬಿನೆಟ್ ಸೇರುವ ಸುಳಿವನ್ನೂ ಯತೀಂದ್ರ ಅವರು ನೀಡಿದ್ದಾರೆ ಎಂದರು.
ಎಲ್ಲಕ್ಕಿಂತ ಮಿಗಿಲಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಇಡೀ ರಾಜ್ಯದ ಜನತೆಗೆ ಅನ್ಯಾಯ ಮಾಡಿದೆ; ದ್ರೋಹ ಎಸಗಿದೆ ಎಂಬುದನ್ನು ಯತೀಂದ್ರ ಅವರು ಒಪ್ಪಿರುವುದು ಜಗಜ್ಜಾಹೀರಾಗಿದೆ ಎಂದು ನುಡಿದರು. ಅವರ ಅಂತರಾಳದ ಮಾತನ್ನು ಅವರು ಆಡಿದ್ದಾರೆ. ಜೊತೆಗೇ ನಾಡಿನ ಜನರ ನಾಡಿಮಿಡಿತವನ್ನೂ ಯತೀಂದ್ರ ಸಿದ್ದರಾಮಯ್ಯನವರು ಅರ್ಥ ಮಾಡಿಕೊಂಡೇ ಶಿವರಾತ್ರಿ ಬಳಿಕ ಒಳ್ಳೆಯದಾಗಲಿದೆ ಎಂಬ ಆಶಾಭಾವವನ್ನು ವ್ಯಕ್ತಪಡಿಸಿದ್ದಾರೆ ಎಂಬುದು ಸ್ಪಷ್ಟ ಎಂದು ತಿಳಿಸಿದರು.
ಕರಾವಳಿ ಜಿಲ್ಲೆ ಬಗ್ಗೆ ಪ್ರಿಯಾಂಕ್ ಖರ್ಗೆಯವರ ಹೇಳಿಕೆ ಅಕ್ಷಮ್ಯ ಅಪರಾಧ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ನೀವು ಐಟಿ, ಬಿಟಿ ಸಚಿವರಾಗಿ ಕರಾವಳಿ ಜಿಲ್ಲೆಗಳಿಗೆ, ಗುಲ್ಬರ್ಗ ಜಿಲ್ಲೆಗೆ ಎಷ್ಟು ಐಟಿ ಬಿಟಿ ಕೈಗಾರಿಕೆ ತಂದಿದ್ದೀರಿ ಎಂಬುದಕ್ಕೆ ಉತ್ತರ ಕೊಡಿ ಎಂದು ಸವಾಲು ಹಾಕಿದರು. ಬೆಂಗಳೂರು ಬಿಟ್ಟರೆ ಕರಾವಳಿಯ ಜಿಲ್ಲೆಗಳು ಅತಿ ಹೆಚ್ಚು ಅಭಿವೃದ್ಧಿ ಹೊಂದುತ್ತಿವೆ ಎಂದು ಗಮನ ಸೆಳೆದರು.

