ಬೆಂಗಳೂರು : ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಮತ್ತು ಸಾಲದ ವಿವರಗಳನ್ನು ಮರೆಮಾಚಿದ್ದಾರೆ ಎಂಬ ಕಾರಣಕ್ಕೆ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದ್ದು, ಈ ತೀರ್ಪಿಗೆ ದೂರುದಾರರಾದ ಬಿಜೆಪಿ ಅಭ್ಯರ್ಥಿ ಸಿ. ಮುನಿರಾಜು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ ಮುನಿರಾಜು ಇದು ನ್ಯಾಯಕ್ಕೆ ಸಂದ ಜಯವಾಗಿದೆ. “ಇದು ಕೇವಲ ವೈಯಕ್ತಿಕ ಜಯವಲ್ಲ, ಬದಲಿಗೆ ನ್ಯಾಯಕ್ಕೆ ಮತ್ತು ಬಾಗೇಪಲ್ಲಿ ಕ್ಷೇತ್ರದ ಜನತೆಗೆ ಸಂದ ಜಯ” ಎಂದು ಬಣ್ಣಿಸಿದ್ದಾರೆ.
ಚುನಾವಣಾ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿ ಮತದಾರರನ್ನು ದಾರಿ ತಪ್ಪಿಸಿದ್ದಕ್ಕೆ ಹೈಕೋರ್ಟ್ ಸೂಕ್ತ ಪಾಠ ಕಲಿಸಿದೆ. ಸತ್ಯಕ್ಕೆ ಯಾವಾಗಲೂ ಜಯ ಸಿಗುತ್ತದೆ ಎಂಬುದು ಈ ತೀರ್ಪಿನಿಂದ ಸಾಬೀತಾಗಿದೆ ಎನ್ನುತ್ತಾ ತೀರ್ಪು ನೀಡಿದ ನ್ಯಾಯಪೀಠಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ನ್ಯಾಯಾಂಗ ವ್ಯವಸ್ಥೆಯು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದು ಹೇಳಿದ್ದಾರೆ.ಸುಮಾರು ಎರಡು ವರ್ಷಗಳ ಕಾಲ ತಾವು ನಡೆಸಿದ ಸುದೀರ್ಘ ಕಾನೂನು ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.
ಹಿನ್ನೆಲೆ:
ಸುಬ್ಬಾರೆಡ್ಡಿ ಅವರು ತಮ್ಮ ಅಫಿಡವಿಟ್‌ನಲ್ಲಿ ಅಕ್ರಮಗಳನ್ನು ಎಸಗಿದ್ದಾರೆ ಎಂದು ಆರೋಪಿಸಿ ಮುನಿರಾಜು ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್ ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ರದ್ದುಗೊಳಿಸಿದೆಯಾದರೂ, ಮುನಿರಾಜು ಅವರನ್ನು ವಿಜಯಿ ಎಂದು ಘೋಷಿಸಲು ನಿರಾಕರಿಸಿದೆ.

