Fri. Mar 6th, 2026

“ಜನರ ಕಣ್ಣೀರು ಒರೆಸದ ಅಧಿಕಾರ ನಮಗೆ ಬೇಕಿಲ್ಲ”: ಕುಮಾರಸ್ವಾಮಿ

Share this with Friends

ತುಮಕೂರು: “ಅಧಿಕಾರ ಎಂಬುದು ಕೇವಲ ಕುರ್ಚಿಯ ಮೇಲೆ ಕೂರಲಿಕ್ಕಲ್ಲ, ಅದು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಸಾಧನವಾಗಬೇಕು. ಶಾಸಕ ಸುರೇಶ್ ಬಾಬು ಅವರು ನಡೆಸುತ್ತಿರುವ ‘ಜನಸ್ಪಂದನ’ ಅಂತಹ ಒಂದು ಪವಿತ್ರ ಕಾರ್ಯ,” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದರು.

ಇಂದು ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ‘ಜನಸ್ಪಂದನ’ ಕಾರ್ಯಕ್ರಮದ 100ನೇ ವಾರದ ಸಂಭ್ರಮ ಹಾಗೂ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ತಮ್ಮ ಭಾಷಣದಲ್ಲಿ ಶಾಸಕ ಸುರೇಶ್ ಬಾಬು ಅವರ ಕಾರ್ಯಕ್ಷಮತೆಯನ್ನು ಮೆಚ್ಚುತ್ತಲೇ, ರಾಜಕೀಯ ಬದ್ಧತೆಯ ಬಗ್ಗೆ ಪ್ರಸ್ತಾಪಿಸಿದರು. “ಸೋಲು-ಗೆಲುವು ರಾಜಕೀಯದಲ್ಲಿ ಸಾಮಾನ್ಯ. ಆದರೆ ಗೆದ್ದ ನಂತರ ಕ್ಷೇತ್ರದ ಜನರನ್ನು ಮರೆತು ರಾಜಧಾನಿಗೆ ಸೀಮಿತವಾಗುವ ರಾಜಕಾರಣಿಗಳ ನಡುವೆ, ಸುರೇಶ್ ಬಾಬು ಅವರು ಪ್ರತಿ ಶನಿವಾರ ಹಳ್ಳಿ ಹಳ್ಳಿಗಳಿಗೆ ಹೋಗುತ್ತಿರುವುದು ವಿರೋಧ ಪಕ್ಷದವರಿಗೂ ಮಾದರಿಯಾಗಲಿ,” ಎಂದು ಕುಟುಕಿದರು.

ಒಕ್ಕೂಟ ವ್ಯವಸ್ಥೆ ಮತ್ತು ಕೇಂದ್ರದ ಸಹಕಾರ:

ವೇದಿಕೆಯಲ್ಲಿದ್ದ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಹೆಸರನ್ನು ಪ್ರಸ್ತಾಪಿಸುತ್ತಾ, “ನಾವಿಬ್ಬರೂ ಇಂದು ಕೇಂದ್ರದಲ್ಲಿ ಸಚಿವರಾಗಿದ್ದೇವೆ. ರಾಜಕೀಯವಾಗಿ ನಮ್ಮ ಹಾದಿಗಳು ಬೇರೆಯಾಗಿದ್ದರೂ, ಕರ್ನಾಟಕದ ಅಭಿವೃದ್ಧಿ ಮತ್ತು ಈ ಕ್ಷೇತ್ರದ ಏಳಿಗೆಗಾಗಿ ನಾವು ಕೈಜೋಡಿಸಿದ್ದೇವೆ. ಇದು ಕೇವಲ ರಾಜಕೀಯ ಹೊಂದಾಣಿಕೆಯಲ್ಲ, ಇದು ಜನರ ಅಭಿವೃದ್ಧಿಗಾಗಿ ಮಾಡಿಕೊಂಡಿರುವ ಪವಿತ್ರ ಮೈತ್ರಿ,” ಎಂದು ರಾಜಕೀಯ ಮೈತ್ರಿಯ ಅನಿವಾರ್ಯತೆ ಮತ್ತು ಮಹತ್ವವನ್ನು ಒತ್ತಿ ಹೇಳಿದರು.

ಕಾರ್ಯಕರ್ತರಿಗೆ ಕರೆ:

“ಜನಪರ ಕೆಲಸ ಮಾಡುವವರನ್ನು ಜನರು ಎಂದಿಗೂ ಕೈಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಲಿದೆ. ಕಾರ್ಯಕರ್ತರು ಎದೆಗುಂದದೆ ಸರ್ಕಾರದ ವೈಫಲ್ಯಗಳ ವಿರುದ್ಧ ಮತ್ತು ನಮ್ಮ ಪಕ್ಷದ ಜನಪರ ಕೆಲಸಗಳ ಪರವಾಗಿ ಧ್ವನಿ ಎತ್ತಬೇಕು,” ಎಂದು ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

ವಿರೋಧ ಪಕ್ಷಗಳ ಟೀಕೆಗೆ ಪ್ರತ್ಯುತ್ತರ:

ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಪ್ರಸಕ್ತ ಆಡಳಿತದ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಅವರು, “ಬರಿ ಪ್ರಚಾರಕ್ಕಾಗಿ ಯೋಜನೆಗಳನ್ನು ಘೋಷಿಸುವುದು ರಾಜಕೀಯವಲ್ಲ; ಸುರೇಶ್ ಬಾಬು ಅವರು ಮಾಡುತ್ತಿರುವಂತೆ ಜನರಿಗೆ ನೇರವಾಗಿ ಆರೋಗ್ಯ ಮತ್ತು ಆರ್ಥಿಕ ಸವಲತ್ತು ತಲುಪಿಸುವುದು ನಿಜವಾದ ಆಡಳಿತ,” ಎಂದರು.

ರಾಜ್ಯದಲ್ಲಿರುವುದು ಲೂಟಿಕೋರರ ಸರ್ಕಾರ: “ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಜನರ ಕಷ್ಟಗಳಿಗಿಂತ ಲೂಟಿ ಮಾಡುವುದೇ ಮುಖ್ಯವಾಗಿದೆ. ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡುತ್ತಿರುವ ಈ ಸರ್ಕಾರಕ್ಕೆ ಜನರ ಶಾಪ ತಟ್ಟಲಿದೆ,” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಗುಡುಗಿದರು.

ಶೇ. 60ರಷ್ಟು ಕಮಿಷನ್ ಆರೋಪ: “ಹಿಂದೆ ಶೇ. 40ರಷ್ಟು ಕಮಿಷನ್ ಎಂದು ಆರೋಪ ಮಾಡುತ್ತಿದ್ದವರು ಇಂದು ಅಧಿಕಾರಕ್ಕೆ ಬಂದ ಮೇಲೆ ಶೇ. 60ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಗುತ್ತಿಗೆದಾರರ ಬಾಕಿ ಪಾವತಿಸಲು ಹಣವಿಲ್ಲದಿದ್ದರೂ, ವರ್ಗಾವಣೆ ದಂಧೆ ಮಾತ್ರ ಜೋರಾಗಿ ನಡೆದಿದೆ,” ಎಂದು ಭ್ರಷ್ಟಾಚಾರದ ಆರೋಪ ಮಾಡಿದರು.

ಅಭಿವೃದ್ಧಿ ಕುಂಠಿತ: “ಬರಿ ರಾಜಕೀಯ ಪ್ರಚಾರಕ್ಕಾಗಿ ಗ್ಯಾರಂಟಿಗಳನ್ನು ಘೋಷಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಬೇಕಾದ ಅನುದಾನವನ್ನು ನಿಲ್ಲಿಸಲಾಗಿದೆ. ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಒಂದು ರಸ್ತೆ ದುರಸ್ತಿ ಮಾಡಿಸಲು ಕೂಡ ಸರ್ಕಾರದಲ್ಲಿ ಹಣವಿಲ್ಲ,” ಎಂದು ವಾಗ್ದಾಳಿ ನಡೆಸಿದರು.

ರೈತರ ನಿರ್ಲಕ್ಷ್ಯ: ಸಕ್ಕರೆ ಬೆಳೆಗಾರರ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಅವರು, ರೈತರು ಸಂಕಷ್ಟದಲ್ಲಿದ್ದಾಗ ಸರ್ಕಾರ ಬರಿ ಸಮಿತಿಗಳನ್ನು ರಚಿಸಿ ಕಾಲಹರಣ ಮಾಡುತ್ತಿದೆ ಹೊರತು ರೈತರಿಗೆ ಬೆಂಬಲ ಬೆಲೆ ನೀಡುತ್ತಿಲ್ಲ ಎಂದು ಟೀಕಿಸಿದರು.

ಸರ್ಕಾರದ ಅಸ್ಥಿರತೆ: “ಈ ಸರ್ಕಾರ 2028ರವರೆಗೆ ಉಳಿಯುವುದು ಕಷ್ಟ. ಆಡಳಿತ ಪಕ್ಷದ ಶಾಸಕರಲ್ಲೇ ತೀವ್ರ ಅಸಮಾಧಾನವಿದೆ. ಅಭಿವೃದ್ಧಿಗೆ ಹಣವಿಲ್ಲದ ಕಾರಣ ಶಾಸಕರು ಜನರ ಬಳಿ ಹೋಗಲು ಹೆದರುತ್ತಿದ್ದಾರೆ,” ಎಂದು ಸರ್ಕಾರ ಪತನದ ಭವಿಷ್ಯ  ನುಡಿದರು.

ದಾರಿ ತಪ್ಪಿಸುವ ತಂತ್ರ: ಜಾತಿ ಗಣತಿ ಹಾಗೂ ಇನ್ನಿತರ ವಿಷಯಗಳನ್ನು ಮುನ್ನೆಲೆಗೆ ತಂದು ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಜನಸೇವೆಯೇ ನಮ್ಮ ಮಂತ್ರ:

ರಾಜ್ಯ ಸರ್ಕಾರದ ವೈಫಲ್ಯಗಳ ನಡುವೆ, ಶಾಸಕ ಸುರೇಶ್ ಬಾಬು ಅವರು ವೈಯಕ್ತಿಕ ಕಾಳಜಿಯಿಂದ ಇಂತಹ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಅಭಿನಂದನೀಯ. ಜನರಿಗೆ ಬೇಕಾಗಿರುವುದು ಬರಿ ಭಾಷಣವಲ್ಲ, ಇಂತಹ ಸ್ಪಂದನೆ ಎಂದು ಅವರು ಭಾಷಣದುದ್ದಕ್ಕೂ ಪ್ರತಿಪಾದಿಸಿದರು

 


Share this with Friends

Related Post