Fri. Mar 6th, 2026

ಅಂಗಾಂಗ ದಾನ ಸಮಾಜದಲ್ಲಿ ಆಂದೋಲನವಾಗಲಿ: ಸಚಿವ ಎಂ.ಬಿ. ಪಾಟೀಲ್ ಕರೆ

Share this with Friends

ವಿಜಯಪುರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ವಿಜಯಪುರದ ಯುವಕ ಬಲರಾಮ ಕೃಷ್ಣ ಬಾಗಲಕೋಟ್ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬದವರು ಮಾನವೀಯತೆಯ ಉನ್ನತ ಉದಾಹರಣೆ ನೀಡಿದ್ದಾರೆ. ಈ ಶ್ಲಾಘನೀಯ ಕಾರ್ಯಕ್ಕಾಗಿ ಬಲರಾಮ ಕೃಷ್ಣ ಅವರ ಕುಟುಂಬಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇಂದು ನಗರದ ಬಿಎಲ್‌ಡಿಇ (BLDE) ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮೃತರ ಕುಟುಂಬದವರನ್ನು ಗೌರವಿಸಿ ಮಾತನಾಡಿದ ಸಚಿವರು, “ಅತೀವ ದುಃಖದ ಕ್ಷಣದಲ್ಲೂ ಸಂಯಮ ಕಳೆದುಕೊಳ್ಳದೆ, ಸಮಾಜದ ಹಿತದೃಷ್ಟಿಯಿಂದ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ ಕುಟುಂಬದ ನಿರ್ಧಾರ ಮಾದರಿಯಾದುದು. ಬಲರಾಮ ಕೃಷ್ಣ ಅವರು ಸಾವಿನ ನಂತರವೂ ಅನೇಕ ಜೀವಗಳಿಗೆ ಬೆಳಕಾಗಿದ್ದಾರೆ,” ಎಂದರು.

ಸಂಸ್ಥೆಯಿಂದ ನೆರವಿನ ಭರವಸೆ:

“ಅಂಗಾಂಗ ದಾನದಂತಹ ಮಹಾನ್ ಕಾರ್ಯಕ್ಕೆ ಸಹಕರಿಸಿದ ಈ ಕುಟುಂಬದ ಬೆನ್ನಿಗೆ ನಾವು ನಿಲ್ಲಲಿದ್ದೇವೆ. ಕುಟುಂಬದ ಸದಸ್ಯರು ಬಯಸಿದಲ್ಲಿ ಬಿಎಲ್‌ಡಿಇ ಸಂಸ್ಥೆಯ ವತಿಯಿಂದ ಅವರಿಗೆ ಉಚಿತ ಶಿಕ್ಷಣ ಹಾಗೂ ಅರ್ಹತೆಗೆ ಅನುಗುಣವಾಗಿ ಉದ್ಯೋಗದ ಅವಕಾಶವನ್ನು ಒದಗಿಸಲಾಗುವುದು,” ಎಂದು ಸಚಿವರು ಘೋಷಿಸಿದರು.

ಜಾಗೃತಿ ಅಭಿಯಾನಕ್ಕೆ ಕರೆ:

ಅಂಗಾಂಗ ದಾನದ ಮಹತ್ವದ ಕುರಿತು ಮಾತನಾಡಿದ ಅವರು, “ದೇಹವು ಮಣ್ಣಾಗುವ ಬದಲು ಮತ್ತೊಬ್ಬರ ಬದುಕಿಗೆ ಆಸರೆಯಾಗುವುದು ಶ್ರೇಷ್ಠ ಕಾರ್ಯ. ಇದು ಕೇವಲ ಒಂದು ಘಟನೆಯಾಗಿ ಉಳಿಯಬಾರದು, ಸಮಾಜದಲ್ಲಿ ಒಂದು ಆಂದೋಲನವಾಗಿ ರೂಪುಗೊಳ್ಳಬೇಕು. ವಿದೇಶಗಳಲ್ಲಿ ಇರುವಂತೆ ನಮ್ಮ ದೇಶದಲ್ಲೂ ಅಂಗಾಂಗ ದಾನದ ಕುರಿತು ವ್ಯಾಪಕ ಅರಿವು ಮೂಡಿಸುವ ಅಗತ್ಯವಿದೆ. ಈ ಪವಿತ್ರ ಅಭಿಯಾನ ನನ್ನಿಂದಲೇ ಆರಂಭವಾಗಲು ನನ್ನ ಸಂಪೂರ್ಣ ಸಹಮತವಿದೆ,” ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಮೃತ ಬಲರಾಮ ಕೃಷ್ಣ ಬಾಗಲಕೋಟ್ ಅವರ ಕುಟುಂಬದ ಸದಸ್ಯರು, ಬಿಎಲ್‌ಡಿಇ ಸಂಸ್ಥೆಯ ಸಮಕುಲಾಧಿಪತಿಗಳಾದ ಡಾ. ವೈ. ಎಂ. ಜಯರಾಜ, ಪ್ರಭಾರಿ ಕುಲಪತಿಗಳಾದ ಡಾ. ಅರುಣ ಇನಾಮದಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


Share this with Friends

Related Post