Fri. Mar 6th, 2026

ನಾಯಂಡಹಳ್ಳಿ ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ಅವಕಾಶ: ಯಾವ ರೈಲುಗಳು ನಿಲ್ಲಲಿವೆ ಗೊತ್ತಾ?

Share this with Friends

ಬೆಂಗಳೂರು: ಸುರಕ್ಷತೆಯನ್ನು ಸುಧಾರಿಸಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ರಸ್ತೆ ಕೆಳ ಸೇತುವೆಗಳು ಮತ್ತು ರಸ್ತೆ ಮೇಲ್ಸೇತುವೆಗಳ ನಿರ್ಮಾಣದ ಮೂಲಕ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ತೆಗೆದುಹಾಕಲು ಆದ್ಯತೆ ನೀಡುತ್ತಿದೆ. ಭಾರತೀಯ ರೈಲ್ವೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಇಂದು ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ಸಂಖ್ಯೆ 16215/16216 ಮೈಸೂರು – ಕೆಎಸ್ಆರ್ ಬೆಂಗಳೂರು- ಮೈಸೂರು ಚಾಮುಂಡಿ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 17307/17308 ಮೈಸೂರು – ಬಾಗಲಕೋಟೆ- ಮೈಸೂರು ಬಸವ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16235/16236 ತೂತ್ತುಕುಡಿ – ಮೈಸೂರು- ತೂತ್ತುಕುಡಿ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16535/16536 ಮೈಸೂರು – ಪಂಢರಪುರ- ಮೈಸೂರು ಗೋಲ್‌ಗುಂಬಜ್‌ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ಎಕ್ಸ್ಪ್ರೆಸ್ ರೈಲುಗಳಿಗೆ ನಾಯಂಡಹಳ್ಳಿ ನಿಲ್ದಾಣದಲ್ಲಿ ನಿಲುಗಡೆಯನ್ನು ಒದಗಿಸುವ ಮೂಲಕ ನಾಯಂಡಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ.  ಇದರಿಂದ ಪ್ರತಿದಿನ ಸಂಚರಿಸುವ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.

ಪ್ರಸ್ತುತ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ₹7,748 ಕೋಟಿ ಹಂಚಿಕೆ ಮಾಡಲಾಗಿದ್ದು,  ರಾಜ್ಯದಲ್ಲಿ ₹52,950 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳು ಪ್ರಸ್ತುತ ಪ್ರಗತಿಯಲ್ಲಿವೆ. ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವಿನ ಚತುಷ್ಪಥ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಯಲಹಂಕದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು  ಹೇಳಿದರು.

ನಂತರ, ವಿಜಯನಗರ ಮತ್ತು ಪಾದರಾಯನಪುರ ನಡುವೆ ಪುನರ್ನಿರ್ಮಿಸಿದ ರಸ್ತೆ ಮೇಲ್ಸೇತುವೆಯನ್ನು ಉದ್ಘಾಟಿಸಿದರು. ಭಾರತ ಸರ್ಕಾರವು ₹14 ಕೋಟಿ ವೆಚ್ಚದಲ್ಲಿ ಈ ರಸ್ತೆ ಮೇಲ್ಸೇತುವೆಯನ್ನು ನಿರ್ಮಿಸಿದೆ. ಈ ಸೇತುವೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಸಂಪರ್ಕವನ್ನು ಸುಧಾರಿಸುವ ಮೂಲಕ ಗೋರಿಪಾಳ್ಯ, ವಿಜಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ಭಾರತೀಯ ರೈಲ್ವೆಯು ಪ್ರಗತಿಪಥದಲ್ಲಿ ಮುಂದುವರಿಯುತ್ತಿದೆ ಎಂದರು.

ಪ್ರಯಾಣಿಕರ ಅನುಕೂಲಕ್ಕಾಗಿ, ಇಂದಿನಿಂದ ಜಾರಿಗೆ ಬರುವಂತೆ ನಾಲ್ಕು ಜೋಡಿ ರೈಲುಗಳಿಗೆ ನಾಯಂಡಹಳ್ಳಿ ನಿಲ್ದಾಣದಲ್ಲಿ ನಿಲುಗಡೆಯನ್ನು ಒದಗಿಸಲು ನಿರ್ಧರಿಸಲಾಗಿದೆ:

1. ರೈಲು ಸಂಖ್ಯೆ 16215 ಮೈಸೂರು – ಕೆಎಸ್ಆರ್ ಬೆಂಗಳೂರು ಚಾಮುಂಡಿ ಎಕ್ಸ್‌ಪ್ರೆಸ್ ಬೆಳಿಗ್ಗೆ 08:45 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ 08:46 ಕ್ಕೆ ಹೊರಡಲಿದೆ. ರೈಲು ಸಂಖ್ಯೆ 16216 ಕೆಎಸ್ಆರ್ ಬೆಂಗಳೂರು – ಮೈಸೂರು ಚಾಮುಂಡಿ ಎಕ್ಸ್‌ಪ್ರೆಸ್ ಸಂಜೆ 06:39 ಕ್ಕೆ ಆಗಮಿಸಿ ಸಂಜೆ 06:40 ಕ್ಕೆ ಹೊರಡಲಿದೆ.

2. ರೈಲು ಸಂಖ್ಯೆ 17307 ಮೈಸೂರು – ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ಮಧ್ಯಾಹ್ನ 03:16 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ 03:17 ಕ್ಕೆ ಹೊರಡಲಿದೆ. ರೈಲು ಸಂಖ್ಯೆ 17308 ಬಾಗಲಕೋಟೆ – ಮೈಸೂರು ಬಸವ ಎಕ್ಸ್‌ಪ್ರೆಸ್ ಬೆಳಿಗ್ಗೆ 08:19 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ 08:20 ಕ್ಕೆ ಹೊರಡಲಿದೆ.

3. ರೈಲು ಸಂಖ್ಯೆ 16235 ತೂತ್ತುಕುಡಿ – ಮೈಸೂರು ಎಕ್ಸ್‌ಪ್ರೆಸ್ ಬೆಳಿಗ್ಗೆ 06:49 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ ಬೆಳಿಗ್ಗೆ 06:50 ಕ್ಕೆ ಹೊರಡುತ್ತದೆ. ರೈಲು ಸಂಖ್ಯೆ 16236 ಮೈಸೂರು – ತೂತ್ತುಕುಡಿ ಎಕ್ಸ್‌ಪ್ರೆಸ್ ರಾತ್ರಿ 08:14 ಕ್ಕೆ ಆಗಮಿಸಿ 08:15 ಕ್ಕೆ ಹೊರಡಲಿದೆ.

4. ರೈಲು ಸಂಖ್ಯೆ 16535 ಮೈಸೂರು – ಪಂಢರಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಸಂಜೆ 05:40 ಕ್ಕೆ ನಾಯಂಡಹಳ್ಳಿಗೆ ಆಗಮಿಸಿ ಸಂಜೆ 05:41 ಕ್ಕೆ ಹೊರಡುತ್ತದೆ. ರೈಲು ಸಂಖ್ಯೆ 16536 ಪಂಢರಪುರ – ಮೈಸೂರು ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಬೆಳಿಗ್ಗೆ 07:44 ಕ್ಕೆ ಆಗಮಿಸಿ ಬೆಳಿಗ್ಗೆ 07:45 ಕ್ಕೆ ಹೊರಡಲಿದೆ.

ಕೆಎಸ್ಆರ್ ಬೆಂಗಳೂರು ಮತ್ತು ನಾಯಂಡಹಳ್ಳಿ ನಿಲ್ದಾಣಗಳ ನಡುವಿನ ಆರ್‌ಓಬಿ ಸಂಖ್ಯೆ 431 ರ ಪುನರ್ನಿರ್ಮಾಣ

ಮೈಸೂರು-ಬೆಂಗಳೂರು ರೈಲ್ವೆ ಮಾರ್ಗದ ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣ ಮತ್ತು ನಾಯಂಡಹಳ್ಳಿ ನಿಲ್ದಾಣಗಳ ನಡುವೆ  ಕಿ.ಮೀ 3/200–300 ರಲ್ಲಿ ಈ  ರಸ್ತೆ ಮೇಲ್ಸೇತುವೆ ಸಂಖ್ಯೆ 431 ನ್ನು ಪುನರ್‌ ನಿರ್ಮಿಸಲಾಗಿದೆ.

ಈ ರಸ್ತೆ ಮೇಲ್ಸೇತುವೆ ವಿಜಯನಗರ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಇದಕ್ಕೂ ಮೊದಲಿದ್ದ ಸೇತುವೆಯು ಹಳೆಯದಾಗಿದ್ದು, ಈ ರಸ್ತೆಯ ಪ್ರಾಮುಖ್ಯತೆ ಮತ್ತು ಸುರಕ್ಷತೆಯನ್ನು ಪರಿಗಣಿಸಿ  ಹೊಸ ರಸ್ತೆ ಮೇಲ್ಸೇತುವೆಯನ್ನು ನಿರ್ಮಿಸಲಾಗಿದೆ.

ಹೊಸ ರಸ್ತೆ ಮೇಲ್ಸೇತುವೆಯು ಮೈಸೂರು ರಸ್ತೆ ಕಡೆ  86 ಮೀಟರ್ ಮತ್ತು ವಿಜಯನಗರ ಕಡೆ  110 ಮೀಟರ್ ಉದ್ದದ ಅಪ್ರೋಚ್ ರಸ್ತೆ ಹೊಂದಿದ್ದು,  1 x 42 ಮೀ ಬೌಸ್ಟ್ರಿಂಗ್ ಗರ್ಡರ್ ಅನ್ನು ಒಳಗೊಂಡಿದೆ.

ಈ ರಸ್ತೆ ಮೇಲ್ಸೇತುವೆಯನ್ನು ಒಟ್ಟು ₹14.10 ಕೋಟಿ ವೆಚ್ಚದಲ್ಲಿ ಪುನರ್ನಿರ್ಮಿಸಲಾಗಿದೆ.

ಈ ರಸ್ತೆ ಮೇಲ್ಸೇತುವೆಯ ನಿರ್ಮಾಣದಿಂದ  ವಿಜಯನಗರ, ಮೈಸೂರು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಸಂಚಾರ ದಟ್ಟಣೆ ಕಡಿಮೆಯಾಗಿ,  ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ  ಅನುವು ಮಾಡಿ ಕೊಡಲಿದೆ.


Share this with Friends

Related Post