Fri. Mar 6th, 2026

ಪೊಲೀಸ್ ಸಿಬ್ಬಂದಿಗೆ ವಸತಿ ಭಾಗ್ಯ: 2030ರವರೆಗೆ ಯೋಜನೆ ವಿಸ್ತರಣೆ

Share this with Friends

ಮಂಗಳೂರು: ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪೊಲೀಸ್ ಗೃಹ’ ಯೋಜನೆಯನ್ನು 2030ರವರೆಗೆ ವಿಸ್ತರಿಸಲಾಗಿದ್ದು, ರಾಜ್ಯಾದ್ಯಂತ ಒಟ್ಟು 60 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಘೋಷಿಸಿದರು.

ನಗರದ ಅತ್ತಾವರ ಪೊಲೀಸ್ ಲೇನ್‌ನಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಮತ್ತು ಜಿಲ್ಲಾ ಪೊಲೀಸ್ ಸಿಬ್ಬಂದಿಗಾಗಿ ನಿರ್ಮಿಸಲಾಗುತ್ತಿರುವ 36 ನೂತನ ವಸತಿಗೃಹಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

33 ಲಕ್ಷಕ್ಕೆ ಏರಿಕೆ:

“ಈ ಹಿಂದೆ ವಸತಿಗೃಹಗಳ ನಿರ್ಮಾಣಕ್ಕೆ ನೀಡುತ್ತಿದ್ದ ಅನುದಾನ ಅತ್ಯಲ್ಪವಾಗಿತ್ತು. ಮನೆಗಳ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಈಗ ಪ್ರತಿ ಮನೆಗೆ ನೀಡುವ ವೆಚ್ಚವನ್ನು 33 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 40 ಸಾವಿರ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ” ಎಂದು ಸಚಿವರು ಮಾಹಿತಿ ನೀಡಿದರು.

ಮಂಗಳೂರು ಜೈಲು ಸ್ಥಳಾಂತರ ಶೀಘ್ರ:

ಮಂಗಳೂರು ನಗರದ ಮಧ್ಯಭಾಗದಲ್ಲಿರುವ ಜಿಲ್ಲಾ ಕಾರಾಗೃಹವನ್ನು ಶೀಘ್ರದಲ್ಲೇ ನಗರದ ಹೊರವಲಯಕ್ಕೆ ಸ್ಥಳಾಂತರಿಸಲಾಗುವುದು. ಇದಕ್ಕಾಗಿ ಈಗಾಗಲೇ ಜಾಗದ ಹುಡುಕಾಟ ನಡೆಯುತ್ತಿದ್ದು, ಆಧುನಿಕ ಸೌಲಭ್ಯವುಳ್ಳ ಹೊಸ ಜೈಲು ನಿರ್ಮಿಸಲಾಗುವುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಮಹತ್ವದ ಘೋಷಣೆ ಮಾಡಿದರು.

ಕರಾವಳಿಯಲ್ಲಿ ಶಾಂತಿ ಸುವ್ಯವಸ್ಥೆ:

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷಗಳು ಕಡಿಮೆಯಾಗುತ್ತಿವೆ. ಮಾದಕ ದ್ರವ್ಯ ಜಾಲವನ್ನು ಭೇದಿಸಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಶಾಂತಿಯುತ ವಾತಾವರಣವು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ” ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಹಾಗೂ ಪೊಲೀಸ್ ವಸತಿ ಮಂಡಳಿಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post