ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ (KSRTC, BMTC, NWKRTC, KKRTC) ನೌಕರರ ವಿವಿಧ ಬೇಡಿಕೆಗಳ ಕುರಿತು ಪ್ರತಿಭಟನೆಗೆ ಕರೆ ನೀಡಿದ್ದರೂ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬಸ್ ಸಂಚಾರವನ್ನು ಸ್ಥಗಿತಗೊಳಿಸುವುದಿಲ್ಲ, ಸಾರಿಗೆ ನೌಕರರ ಪ್ರತಿಭಟನೆಯ ಬಿಸಿ ಸಾರ್ವಜನಿಕರಿಗೆ ತಟ್ಟದಂತೆ ನೋಡಿಕೊಳ್ಳಲು ಸಾರಿಗೆ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಯ ಹಾದಿ ಹಿಡಿದಿರುವ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ,ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದ್ದು, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬಸ್ ಸಂಚಾರವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಬಸ್ ಸಂಚಾರ ನಿಲ್ಲಿಸುತ್ತೇವೆ ಎಂದು ನೌಕರರು ಎಲ್ಲಿಯೂ ಹೇಳಿಲ್ಲ. ಅವರ ನ್ಯಾಯಯುತ ಬೇಡಿಕೆಗಳ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಜನವರಿ 2024 ರಿಂದ ಬಾಕಿ ಇರುವ ವೇತನ ಪರಿಷ್ಕರಣೆ ಮತ್ತು ಬಾಕಿ ವೇತನದ (Arrears) ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕಡ್ಡಾಯ:
ಇದೇ ವೇಳೆ ಶಕ್ತಿ ಯೋಜನೆಯ ದುರ್ಬಳಕೆ ತಡೆಯುವ ಬಗ್ಗೆ ಮಾತನಾಡಿದ ಅವರು, “ಯೋಜನೆಯಲ್ಲಿ ಪಾರದರ್ಶಕತೆ ತರಲು ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ಸಿಗುವಂತೆ ಮಾಡಲು ಸ್ಮಾರ್ಟ್ ಕಾರ್ಡ್ ವಿತರಣೆಗೆ ಸಂಪುಟ ಅನುಮೋದನೆ ನೀಡಿದೆ. ಶೀಘ್ರದಲ್ಲೇ ಈ ಪ್ರಕ್ರಿಯೆ ಆರಂಭವಾಗಲಿದ್ದು, ನಕಲಿ ದಾಖಲೆಗಳಿಗೆ ಬ್ರೇಕ್ ಬೀಳಲಿದೆ” ಎಂದರು.
ಶಾಸಕರ ವಿದೇಶ ಪ್ರವಾಸ: “ನಾನು ಈಗಾಗಲೇ 85 ದೇಶಗಳಿಗೆ ಭೇಟಿ ನೀಡಿದ್ದೇನೆ, ಜ್ಞಾನಾರ್ಜನೆಗಾಗಿ ಶಾಸಕರು ವಿದೇಶಕ್ಕೆ ಪ್ರವಾಸ ಹೋದರೆ ತಪ್ಪೇನು?” ಎಂದು ಶಾಸಕರ ಪ್ರವಾಸವನ್ನು ಸಮರ್ಥಿಸಿಕೊಂಡರು.
ಸಿಬ್ಬಂದಿ ಸುರಕ್ಷತೆ: ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿದ ಸಚಿವರು, ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸಿಬ್ಬಂದಿ ರಕ್ಷಣೆಗೆ ನಮ್ಮ ಆಧ್ಯತೆ ಇರಲಿದೆ ಎಂದರು.
ರಾಜಕೀಯ ಹೇಳಿಕೆ: ಸಚಿವ ಎಚ್.ಸಿ. ಮಹದೇವಪ್ಪ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಾರ್ವಜನಿಕ ಜೀವನದಲ್ಲಿ ಪದಬಳಕೆಯ ಬಗ್ಗೆ ಎಚ್ಚರವಿರಬೇಕು ಎಂದು ಅಭಿಪ್ರಾಯಪಟ್ಟರು.

