ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ಮೈತ್ರಿಯು ಕೇವಲ ಲೋಕಸಭೆ ಅಥವಾ ಉಪಚುನಾವಣೆಗೆ ಸೀಮಿತವಾಗಿಲ್ಲ, ಇದು 2028ರ ವಿಧಾನಸಭಾ ಚುನಾವಣೆಯವರೆಗೂ ಮುಂದುವರಿಯಲಿದ್ದು ಖಚಿತವಾಗಿ ನಮ್ಮ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈತ್ರಿಕೂಟದ ಭವಿಷ್ಯದ ಬಗ್ಗೆ ಚರ್ಚೆಯಾಗುತ್ತಿದೆ ಆದರೆ ಮೈತ್ರಿಕೂಟ ಮುಂದುವರೆಯುವುದರಲ್ಲಿ ಅನುಮಾನ ಬೇಡ,ನಮ್ಮ ಮೈತ್ರಿ ಗಟ್ಟಿಯಾಗಿದ್ದು, ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ.”ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ರಾಜ್ಯದಲ್ಲಿ 140 ರಿಂದ 150 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ಪಾಠ ಕಲಿಸಲಿದ್ದಾರೆ.” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಬದಲಾವಣೆ ನಮಗೆ ಮುಖ್ಯವಲ್ಲ:
ರಾಜ್ಯ ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿರುವ ಮುಖ್ಯಮಂತ್ರಿ ಬದಲಾವಣೆ ಹಾಗೂ ನಾಯಕತ್ವದ ಪೈಪೋಟಿ ಕುರಿತು ಪ್ರತಿಕ್ರಿಯಿಸಿದ ಅವರು, “ಯಾರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಅಥವಾ ಯಾರನ್ನು ಬದಲಿಸಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಆದರೆ, ಆಡಳಿತ ಪಕ್ಷದೊಳಗಿನ ಈ ಅಧಿಕಾರ ದಾಹದಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ,” ಎಂದು ಟೀಕಿಸಿದರು.
ಸರ್ಕಾರದ ಸಾಧನೆ ಶೂನ್ಯ:
ಸರ್ಕಾರದ 1000 ದಿನಗಳ ಸಂಭ್ರಮಾಚರಣೆಯನ್ನು ಟೀಕಿಸಿದ ನಿಖಿಲ್, “ರಾಜ್ಯವನ್ನು ಸಾಲದ ಸುಳಿಗೆ ದೂಡಿರುವುದೇ ಈ ಸರ್ಕಾರದ ದೊಡ್ಡ ಸಾಧನೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಕೇವಲ ಪ್ರಚಾರಕ್ಕಾಗಿ ಹಣ ವ್ಯಯಿಸಲಾಗುತ್ತಿದೆ,” ಎಂದು ಕಿಡಿಕಾರಿದರು. ಇದೇ ಸಂದರ್ಭದಲ್ಲಿ ಮೈಸೂರಿನ ಪಿರಿಯಾಪಟ್ಟಣದಲ್ಲಿ ಹಮ್ಮಿಕೊಂಡಿರುವ ‘ಜನರೊಂದಿಗೆ ಜನತಾದಳ’ ಅಭಿಯಾನದ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿರುವುದಾಗಿ ಅವರು ತಿಳಿಸಿದರು.

