ಬೆಂಗಳೂರು: “ಕಳೆದ ಮೂರು ತಿಂಗಳಿಂದ ರಾಜಧಾನಿಯಲ್ಲಿ ಕಸ ವಿಲೇವಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಗುತ್ತಿಗೆದಾರರಿಗೆ ಹಣ ಪಾವತಿಸದ ಕಾರಣ ಬೆಂಗಳೂರು ಇಂದು ‘ಗಾರ್ಬೇಜ್ ಸಿಟಿ’ಯಾಗಿ ಮಾರ್ಪಟ್ಟಿದೆ. ಜನರ ಶಾಪ ಸರ್ಕಾರಕ್ಕೆ ತಟ್ಟುವ ಮುನ್ನ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಿ,” ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನಗರದಾದ್ಯಂತ ಲಾರಿಗಳಲ್ಲಿ ಕಸ ತುಂಬಿ ತುಳುಕುತ್ತಿದ್ದು, ನೈರ್ಮಲ್ಯ ಹದಗೆಟ್ಟಿದೆ. ಬಾಕಿ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಸಂಘವು ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಸಿದ್ಧತೆ ನಡೆಸಿದೆ. ಅಭಿವೃದ್ಧಿ ಮರೆತು ಸರ್ಕಾರ ಕೇವಲ ಒಳಜಗಳದಲ್ಲಿ ಮುಳುಗಿದೆ ಎಂದು ಟೀಕಿಸಿದರು.
‘ನಾಯಿಗಳ ಕಿತ್ತಾಟ’ ವಾದಕ್ಕೆ ತಿರುಗೇಟು:
ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಕಿಡಿಕಾರಿದ ಪ್ರತಿಪಕ್ಷಗಳು, “ಸಿಎಂ ಮತ್ತು ಡಿಸಿಎಂ ನಡುವಿನ ಭಿನ್ನಾಭಿಪ್ರಾಯವನ್ನು ಸಚಿವ ಮಹದೇವಪ್ಪ ಅವರು ‘ನಾಯಿಗಳ ಕಿತ್ತಾಟ’ಕ್ಕೆ ಹೋಲಿಸಿದ್ದಾರೆ. ಡಿ.ಕೆ. ಸುರೇಶ್ ಅವರು ನಾವು ‘ನಿಯತ್ತಿನ ನಾಯಿಗಳು’ ಎಂದಿದ್ದಾರೆ. ಹಾಗಾದರೆ ಅವರ ದೃಷ್ಟಿಯಲ್ಲಿ ಬೀದಿ ನಾಯಿಗಳು ಯಾರು? ಕಾಂಗ್ರೆಸ್ನಲ್ಲಿ ಈಗ ನಿಯತ್ತಿನ ನಾಯಿ ಮತ್ತು ಬೀದಿ ನಾಯಿಗಳ ನಡುವೆ ಕಿತ್ತಾಟ ನಡೆಯುತ್ತಿದೆ,” ಎಂದು ಲೇವಡಿ ಮಾಡಿದರು.
ವಿಧಾನಸೌಧದ ಘನತೆ ಮಣ್ಣುಪಾಲು:
“ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದ್ದರೆ ಅದನ್ನು ಬಹಿರಂಗಪಡಿಸಲಿ. ವಿದೇಶ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಬೆಂಬಲಿಗರು ಅಲ್ಲಿಂದಲೇ ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ಮಾಡಬೇಕಾದ ವಿಧಾನಸೌಧದ ಘನತೆ ಕಾಂಗ್ರೆಸ್ನ ಒಳರಾಜಕಾರಣದಿಂದ ಹರಾಜಾಗುತ್ತಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿರುವಾಗ ಯಾವ ಮುಖ ಹೊತ್ತು ಬಜೆಟ್ ಮಂಡಿಸುತ್ತಾರೆ?” ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ಹರಿಹಾಯ್ದರು.
‘ಗುತ್ತಿಗೆದಾರರ ಹಣ ಆಂಧ್ರಪಾಲು;
ರಾಜ್ಯ ಕಾಂಗ್ರೆಸ್ ಸರ್ಕಾರವು ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಿ, ಆಂಧ್ರಪ್ರದೇಶದ ಗುತ್ತಿಗೆದಾರರಿಗೆ ಮಣೆ ಹಾಕುತ್ತಿದೆ ಎಂದು ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ. ಕಾಮಗಾರಿಗಳ ಹಂಚಿಕೆಯಲ್ಲಿ ದೊಡ್ಡ ಮಟ್ಟದ ‘ಮ್ಯಾಚ್ ಫಿಕ್ಸಿಂಗ್’ ನಡೆಯುತ್ತಿದ್ದು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕೆಲಸಗಳನ್ನು ತೆಲಂಗಾಣದ ಸಂಸ್ಥೆಗಳಿಗೆ ನೀಡಲಾಗುತ್ತಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿಸರು.
ಕಮಿಷನ್ ಕಬಂಧಬಾಹು:
ಗುತ್ತಿಗೆದಾರರ ಸಂಘದ ಪ್ರಮುಖರ ಪ್ರಕಾರ, ರಾಜ್ಯದಲ್ಲಿ ಕೆಲಸ ಮಾಡುವುದು ದುಸ್ತರವಾಗಿದೆ. “ಬಿಲ್ ಪಾವತಿಗೆ ಹೋದರೆ ಮುಖ್ಯಮಂತ್ರಿಗಳು ನಾಳೆ ಬಾ ಎನ್ನುತ್ತಾರೆ. ಆದರೆ ಸಚಿವರು ದೊಡ್ಡ ಪ್ಯಾಕೇಜ್ಗಳನ್ನು ಸೃಷ್ಟಿಸಿ ಹೊರರಾಜ್ಯದವರಿಗೆ ನೀಡಿ ಕಮಿಷನ್ ಪಡೆಯುತ್ತಿದ್ದಾರೆ. ವಿಶೇಷವಾಗಿ ಬೆಂಗಳೂರಿನ ಕಸ ವಿಲೇವಾರಿಯಲ್ಲಿ 21% ಕಮಿಷನ್ ಹಾವಳಿ ಮಿತಿಮೀರಿದೆ. ಟೆಂಡರ್ ಪಡೆಯಲು 7%, ಬಿಲ್ ಬಿಡುಗಡೆಗೆ 7% ಹಾಗೂ ಎನ್ಒಸಿಗೆ 7% ಹಣ ನೀಡಲೇಬೇಕಾದ ಅನಿವಾರ್ಯತೆ ಇದೆ” ಎಂದು ದೂರಿದ್ದಾರೆ. ಬೆಂಗಳೂರಿನ ಕಸದ ನಿರ್ವಹಣೆಯಲ್ಲಿ ಆಂಧ್ರದ ಮಾಫಿಯಾ ಹಾಗೂ ಸರ್ಕಾರದ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ ಎಂದು ಅಶೋಕ್ ದೂರಿದರು.

