ಬೆಂಗಳೂರು: ಪ್ರವಾಸೋದ್ಯಮವು ಕೇವಲ ಒಂದು ಉದ್ಯಮವಲ್ಲ, ಅದು ಸಮಾಜದ ಅಡೆತಡೆಗಳನ್ನು ನಿವಾರಿಸುವ ಒಂದು ಸಾಮಾಜಿಕ ಶಕ್ತಿ. ಇದರ ಬೆಳವಣಿಗೆಯ ಪ್ರಯೋಜನಗಳು ಬೆಂಗಳೂರಿನಿಂದ ಹಿಡಿದು ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಹಳ್ಳಿಗಳವರೆಗೆ, ಅಂದರೆ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಆಶಯ ವ್ಯಕ್ತಪಡಿಸಿದರು.
ನಗರದ ರೆಸಿಡೆನ್ಸಿ ರಸ್ತೆಯ ಮೈಸೂರು ಹಾಲ್‌ನಲ್ಲಿ ಆಯೋಜಿಸಿದ್ದ `ಕನೆಕ್ಟ್-2026′ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕವನ್ನು ಶಾಂತಿ, ಕಲಿಕೆ ಮತ್ತು ಸಮೃದ್ಧಿಯ ದಾರಿದೀಪವನ್ನಾಗಿಸಲು ಪ್ರವಾಸೋದ್ಯಮ ಕ್ಷೇತ್ರದ ಅಧಿಕಾರಿಗಳು ಮತ್ತು ನೌಕರರು ಶ್ರಮಿಸಬೇಕು ಎಂದು ಕರೆ ನೀಡಿದರು.
ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು:
“ಇಂದು ಪ್ರವಾಸಿಗರೆಂದರೆ ಕೇವಲ ಐಷಾರಾಮಿ ರೆಸಾರ್ಟ್‌ಗಳಿಗೆ ತೆರಳುವವರಲ್ಲ. ಅಂಕಿ ಅಂಶಗಳ ಪ್ರಕಾರ ಶೇ. 80 ರಿಂದ 85 ರಷ್ಟು ಪ್ರವಾಸಿಗರು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂತಹ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಹೋಟೆಲ್, ಹೋಂ ಸ್ಟೇ ಹಾಗೂ ಕಮ್ಯೂನಿಟಿ ಸ್ಟೇ ಸೌಲಭ್ಯಗಳನ್ನು ಕಲ್ಪಿಸುವತ್ತ ಉದ್ಯಮವು ಗಮನಹರಿಸಬೇಕು” ಎಂದು ಸಚಿವರು ತಿಳಿಸಿದರು.
ಆದಾಯ ವೃದ್ಧಿಗೆ ಯೋಜನೆ:
ಸದ್ಯದ ಲೆಕ್ಕಾಚಾರದಂತೆ ಒಬ್ಬ ದೇಶೀಯ ಪ್ರವಾಸಿಗ ಸರಾಸರಿ 6,178 ರೂ. ಹಾಗೂ ವಿದೇಶಿ ಪ್ರವಾಸಿಗ 2,87,261 ರೂ. ವೆಚ್ಚ ಮಾಡುತ್ತಿದ್ದಾರೆ. ಈ ವೆಚ್ಚದ ಪ್ರಮಾಣವನ್ನು ದುಪ್ಪಟ್ಟುಗೊಳಿಸುವ ಮೂಲಕ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವ ಅವಶ್ಯಕತೆಯಿದೆ ಎಂದರು.
ಶಕ್ತಿ ಯೋಜನೆಯ ಸದುಪಯೋಗ:
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಯ ಸದುಪಯೋಗ ಪಡೆದುಕೊಂಡು, ಶೇ. 50 ರಷ್ಟಿರುವ ಮಹಿಳೆಯರಿಗೆ ಅತ್ಯುತ್ತಮ ಪ್ರವಾಸೋದ್ಯಮ ಸೇವೆ ನೀಡುವ ಮೂಲಕ ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
“ಒಂದು ರಾಜ್ಯ, ಹಲವು ಜಗತ್ತು” ಎಂಬ ನುಡಿಗಟ್ಟು ನಮ್ಮ ನಾಡಿನ ಆತ್ಮವನ್ನು ಪ್ರತಿಬಿಂಬಿಸುತ್ತದೆ. ಬೇಲೂರು-ಹಳೇಬೀಡು, ಹಂಪಿ, ಬಾದಾಮಿ, ಪಟ್ಟದಕಲ್ಲು ಅಂತಹ ವಾಸ್ತುಶಿಲ್ಪದ ಅದ್ಭುತಗಳು ಹಾಗೂ 343 ಕಿ.ಮೀ ಉದ್ದದ ಸುಂದರ ಕರಾವಳಿಯನ್ನು ಹೊಂದಿರುವ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಸಚಿವರು ಆಶಿಸಿದರು.
“ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಕೇವಲ ಒಂದು ವಲಯದ ಅಭಿವೃದ್ಧಿಗಾಗಿ ಅಲ್ಲ; ಅದು ಅಂತರ್ಗತ ಬೆಳವಣಿಗೆ, ಶಾಂತಿ ಮತ್ತು ಜ್ಞಾನೋದಯದ ಇಂಜಿನ್ ಆಗಲಿದೆ. ರಾಜ್ಯವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಗೆ ಈ ವಲಯವು ಗಣನೀಯ ಕೊಡುಗೆ ನೀಡಲಿದೆ,” ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಯಾಂಡ್ ಬೆಂಗಳೂರು ಪರಿಕಲ್ಪನೆಗೆ ಒತ್ತು:
“ಬೆಂಗಳೂರು ಟೆಕ್ ಸಮ್ಮಿಟ್ ಹಾಗೂ ಇನ್ವೆಸ್ಟರ್ಸ್ ಮೀಟ್ ಮಾದರಿಯಲ್ಲಿಯೇ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಬ್ರಾಂಡ್ ಬೆಂಗಳೂರು ಅಷ್ಟೇ ಅಲ್ಲದೆ, ‘ಬಿಯಾಂಡ್ ಬೆಂಗಳೂರು’ (ಬೆಂಗಳೂರು ಆಚೆಗೂ) ಪರಿಕಲ್ಪನೆಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದೆಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ‘ಕನೆಕ್ಟ್’ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರವಾಸೋದ್ಯಮದ ಲಾಭ ಗ್ರಾಮೀಣ ಮಟ್ಟಕ್ಕೂ ತಲುಪುವಂತೆ ಮಾಡಬೇಕಿದೆ” ಎಂದರು.
ನೂತನ ಪ್ರವಾಸೋದ್ಯಮ ಮಾದರಿಗಳಿಗೆ ಕರೆ:
ಸಾಂಪ್ರದಾಯಿಕ ಪ್ರವಾಸೋದ್ಯಮದ ಜೊತೆಗೆ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಈ ಕೆಳಗಿನ ಕ್ಷೇತ್ರಗಳನ್ನು ಬೆಳೆಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು:
MICE ಪ್ರವಾಸೋದ್ಯಮ (ಸಭೆ, ಪ್ರೋತ್ಸಾಹಕ, ಸಮಾವೇಶ ಮತ್ತು ಪ್ರದರ್ಶನಗಳು)
ಮೆಡಿಕಲ್ ಟೂರಿಸಂ (ವೈದ್ಯಕೀಯ ಪ್ರವಾಸೋದ್ಯಮ)
ಗಾಲ್ಫ್ ಮತ್ತು ಇವೆಂಟ್ ಟೂರಿಸಂ
ಕಠಿಣ ಸಮಯದಲ್ಲಿ ಸರ್ಕಾರ ನಿಮ್ಮೊಂದಿಗೆ:
“ಪ್ರವಾಸೋದ್ಯಮ ನಿರ್ವಾಹಕರು, ಹೋಟೆಲ್ ಮತ್ತು ಹೋಂ ಸ್ಟೇ ಮಾಲೀಕರು ಈ ಉದ್ಯಮದ ಜೀವಾಳ. ನಿಮ್ಮ ಸಹಕಾರವಿಲ್ಲದೆ ಈ ವಲಯ ಸ್ಥಬ್ದವಾಗುತ್ತದೆ. ಎಂತಹ ಕಠಿಣ ಸಂದರ್ಭದಲ್ಲೂ ನಮ್ಮ ಸರ್ಕಾರ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ. ಸ್ಮಾರಕಗಳ ದತ್ತು ಯೋಜನೆ (ಸ್ಮಾರಕ ಯೋಜನೆ) ಯಶಸ್ಸಿಗೆ ಉದ್ಯಮಿಗಳ ಸಹಕಾರ ಅತ್ಯಗತ್ಯ” ಎಂದು ಸಚಿವರು ಭರವಸೆ ನೀಡಿದರು.
ಎಐ ಯುಗದಲ್ಲಿ ಬದಲಾವಣೆ ಅನಿವಾರ್ಯ:
ಇಂದಿನ ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ತಂತ್ರಜ್ಞಾನದ ಜೊತೆಗೆ ನಮ್ಮ ವರ್ತನೆ ಮತ್ತು ಮನೋಭಾವದಲ್ಲಿ (Attitudinal Change) ಬದಲಾವಣೆ ತರುವುದು ಇಂದಿನ ಅಗತ್ಯವಾಗಿದೆ. ನಾವೆಲ್ಲರೂ ತ್ರಿಕರಣಪೂರ್ವಕವಾಗಿ ಕೈಜೋಡಿಸಿದರೆ ರಾಜ್ಯದ ಪ್ರವಾಸೋದ್ಯಮದ ಭವಿಷ್ಯವನ್ನೇ ಬದಲಾಯಿಸಬಹುದು ಎಂದು ಅವರು ಕರೆ ನೀಡಿದರು.
ಪ್ರವಾಸೋದ್ಯಮ ವಲಯದಲ್ಲಿ 11,200 ಉದ್ಯೋಗ ಸೃಷ್ಟಿಯ ಗುರಿ:
“ರಾಜ್ಯದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಸರ್ಕಾರವು ಇದುವರೆಗೆ 2,091.46 ಕೋಟಿ ರೂ. ಮೊತ್ತದ 122 ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಿಂದ ರಾಜ್ಯದಲ್ಲಿ ಸುಮಾರು 11,200 ನೇರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇದು ಪ್ರವಾಸೋದ್ಯಮ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ,” ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.
ಧನಾತ್ಮಕ ಬದಲಾವಣೆಗೆ ಕರೆ:
ನೀವೆಲ್ಲರೂ ರಾಜ್ಯದ ರಾಯಭಾರಿಗಳಾಗಿ ಕೆಲಸ ಮಾಡಬೇಕು. ಉದ್ಯಮಿಗಳ ಬೆಳವಣಿಗೆಯನ್ನು ಬೆಂಬಲಿಸಲು ಇಲಾಖೆಯು ಬಲವಾದ ಪ್ರೋತ್ಸಾಹಕಗಳು ಮತ್ತು ಸಬ್ಸಿಡಿಗಳ ಚೌಕಟ್ಟನ್ನು ರೂಪಿಸಿದೆ. 343 ಕಿ.ಮೀ ಉದ್ದದ ಕರಾವಳಿಯ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮಂಗಳೂರಿನಲ್ಲಿ ಈಗಾಗಲೇ ಕರಾವಳಿ ಭಾಗಿದಾರರ ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಹೂಡಿಕೆ ಯೋಜನೆಗಳ ವಿಳಂಬಕ್ಕೆ ಸಚಿವರ ವಿಷಾದ:
“ಕಳೆದ ವರ್ಷದ ದಕ್ಷಿಣ ಭಾರತ ರಾಜ್ಯಗಳ ಹೂಡಿಕೆ ಸಮಾವೇಶದಲ್ಲಿ 3,000 ಕೋಟಿ ರೂ. ಮೊತ್ತದ ಒಪ್ಪಂದಗಳು ನಡೆದಿದ್ದವು. ಆದರೆ, ಇಲ್ಲಿಯವರೆಗೆ ಒಂದೂ ಯೋಜನೆ ಸಾಕಾರಗೊಳ್ಳದಿರುವುದು ಬೇಸರದ ಸಂಗತಿ,” ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು. ಕೇವಲ ಒಪ್ಪಂದಗಳಿಗೆ ಸೀಮಿತವಾಗದೆ, ಹೂಡಿಕೆದಾರರು ಪ್ರಾಯೋಗಿಕವಾಗಿ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಮತ್ತು ಹೆಚ್ಚಿನ ಹೂಡಿಕೆದಾರರನ್ನು ರಾಜ್ಯಕ್ಕೆ ಆಕರ್ಷಿಸಬೇಕು ಎಂದು ಅವರು ಸಲಹೆ ನೀಡಿದರು.

