Fri. Mar 6th, 2026

ರಾಜ್ಯದಲ್ಲಿ ಶೀಘ್ರವೇ ‘ಆರೋಗ್ಯ ಹಕ್ಕು ಕಾಯ್ದೆ’ ಜಾರಿ: ಸಚಿವ ದಿನೇಶ್ ಗುಂಡೂರಾವ್ ಘೋಷಣೆ

Share this with Friends

ಬೆಂಗಳೂರು: ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಮಾಡಲು ಸರ್ಕಾರ ಶೀಘ್ರದಲ್ಲೇ ‘ಆರೋಗ್ಯ ಹಕ್ಕು ಕಾಯ್ದೆ’ (Right to Health Act) ಜಾರಿಗೆ ತರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಆರೋಗ್ಯ ಇಲಾಖೆಯ ‘ಅಭಯ ಹಸ್ತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯದ ಹಕ್ಕು ಸಿಗಬೇಕು ಎಂಬ ಉದ್ದೇಶದಿಂದ ‘ಆರೋಗ್ಯ ಹಕ್ಕು ಕಾಯ್ದೆ’ (Right to Health Act) ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು.

ಪ್ರತ್ಯೇಕ ನೇಮಕಾತಿ ಮಂಡಳಿಯ ಅಗತ್ಯ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಮತ್ತು ಪಾರದರ್ಶಕವಾಗಿ ಭರ್ತಿ ಮಾಡಲು ಅನುಕೂಲವಾಗುವಂತೆ ಪ್ರತ್ಯೇಕ ‘ನೇಮಕಾತಿ ಮಂಡಳಿ’ ರಚಿಸಲು ಯೋಜಿಸಲಾಗಿದ್ದು,”ಇಲಾಖೆಯಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗುವುದನ್ನು ತಪ್ಪಿಸಲು ಪ್ರತ್ಯೇಕ ನೇಮಕಾತಿ ಮಂಡಳಿಯ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಮಂಡಳಿ ರಚನೆಯಾದಲ್ಲಿ ನೇಮಕಾತಿ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯಲಿದೆ” ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು

ಜೀವ ಉಳಿಸುವ ‘ಹೃದಯ ಜ್ಯೋತಿ’ ಯೋಜನೆ:

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹೆಸರಿನಲ್ಲಿ ಜಾರಿಗೆ ತಂದಿರುವ ‘ಹೃದಯ ಜ್ಯೋತಿ’ ಯೋಜನೆಯು ರಾಜ್ಯದಲ್ಲಿ ಕ್ರಾಂತಿ ಮಾಡಿದೆ. “ಹೃದಯಾಘಾತವಾದ ಮೊದಲ ಒಂದು ಗಂಟೆಯಲ್ಲಿ ರೋಗಿಗೆ ನೀಡಲಾಗುವ 30,000 ರೂ. ಮೌಲ್ಯದ ಇಂಜೆಕ್ಷನ್ ಅನ್ನು ಸರ್ಕಾರ ಉಚಿತವಾಗಿ ನೀಡುತ್ತಿದ್ದು, ಈವರೆಗೆ 7,800ಕ್ಕೂ ಹೆಚ್ಚು ಜನರ ಜೀವ ಉಳಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು.

ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕ:

ನಮ್ಮ ಇಲಾಖೆಯಲ್ಲಿ ಮೊದಲಿನಿಂದಲೂ ಮಾನವ ಸಂಪನ್ಮೂಲದ ಕೊರತೆ ಇತ್ತು. ಈಗ ವೈದ್ಯರು, ಟೆಕ್ನೀಶಿಯನ್, ಇತರರ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳು ಇದಕ್ಕೆ ಅಗತ್ಯ ಇರುವ ಆರ್ಥಿಕ ಅನುದಾನ ನೀಡಿದ್ದಾರೆ. ಇಂದು ಒಂದು ಸಾವಿರಕ್ಕೂ ಅಧಿಕ ಜನರ ನೇಮಕಾತಿ ಪತ್ರ ನೀಡುತ್ತಿದ್ದೇವೆ. ಇವರೆಲ್ಲ ಸರ್ಕಾರಿ ಹುದ್ದೆಯ ಕನಸು ನನಸು ಮಾಡಿಕೊಂಡಿದ್ದಾರೆ. ಸರ್ಕಾರಿ ಸೇವೆ ಪುಣ್ಯದ ಕೆಲಸ. ನಮ್ಮ ಅಪೇಕ್ಷೆ ಇಷ್ಟೇ, ಪ್ರಾಮಾಣಿಕತೆ, ಬದ್ದತೆಯಿಂದ, ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಬಡಜನರ ಜೊತೆ ನಿಮ್ಮ ನಡವಳಿಕೆ ಬಹಳ ಮುಖ್ಯ. ಕೆಲವರು ಪ್ರಾರಂಭದಲ್ಲಿ ಆದರ್ಶವಾಗಿ ಕೆಲಸ ಮಾಡುತ್ತಾರೆ. ಸ್ವಲ್ಪ ದಿನದ ನಂತರ ಆದರ್ಶ, ಬದ್ದತೆ ಮರೆಯುತ್ತಾರೆ. ಹಾಗಾಗಬಾರದು, ಆದರ್ಶ ನಮ್ಮ ಜೀವನ ಪರ್ಯಂತ ಇಟ್ಟುಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ 320 ಮತ್ತು ರಾಜ್ಯದ ಉಳಿದ ಭಾಗದ 650, ಒಟ್ಟು 970 ಅರ್ಹ ಅರೆ- ವೈದ್ಯಕೀಯ ಹುದ್ದೆಗಳಿಗೆ ಖಾಯಂ ನೇಮಕಾತಿ ಪತ್ರವನ್ನು ಇಂದು ನೀಡುತ್ತಿದ್ದೇವೆ. 77 ಡ್ರಗ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡುತ್ತಿದ್ದೇವೆ. ಇದು ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. ಅದನ್ನು ಸರಿಯಾದ ರೀತಿಯಲ್ಲಿ ವಾದ ಮಂಡಿಸಿ ಅಂತಿಮಗೊಳಿಸಿದ್ದೇವೆ. 223 ಡಿ ಫಾರ್ಮಾ ವಿದ್ಯಾರ್ಥಿಗಳನ್ನು ಅಪ್ರೆಂಟಿಸ್ ಆಗಿ ತೆಗೆದುಕೊಂಡಿದ್ದೇವೆ. ಇನ್ನೂ 700 ವಿದ್ಯಾರ್ಥಿಗಳನ್ನು ನೇಮಕ ಮಾಡಲಾಗುವುದು. ಇದರಿಂದ ಅವರಿಗೆ ವೃತ್ತಿ ಅನುಭವದ ಜೊತೆಗೆ, ಪ್ರತಿ ತಿಂಗಳು 8000 ವೇತನ ಸಹ ನೀಡುತ್ತೇವೆ. ಇದು ದೇಶದಲ್ಲೇ ಮೊದಲು. ಒಂದೆರಡು ತಿಂಗಳಲ್ಲಿ ಸುಮಾರು 220 ತಜ್ಞ ವೈದ್ಯರ ನೇಮಕಾತಿ ಆಗಲಿದ್ದು, ಸರ್ಕಾರಿ ಅಸ್ಪತ್ರೆಯಲ್ಲಿಯೇ ಸುಪರ್ ಸ್ಪೆಷಾಲಿಟಿ ಚಿಕಿತ್ಸೆ ದೊರೆಯಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.


Share this with Friends

Related Post