Fri. Mar 6th, 2026

ರಾಜ್ಯ ಕಾಂಗ್ರೆಸ್ ಗೊಂದಲಕ್ಕೆ ಶೀಘ್ರವೇ ತೆರೆ: ದೆಹಲಿಯಲ್ಲಿ ಖರ್ಗೆ ಭೇಟಿಯಾದ ಸತೀಶ್ ಜಾರಕಿಹೊಳಿ ತಂಡ

Share this with Friends

ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆ ಹಾಗೂ ನಾಯಕತ್ವದ ಕುರಿತಾದ ಚರ್ಚೆಗಳ ಬೆನ್ನಲ್ಲೇ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಪ್ರಮುಖ ನಾಯಕರ ನಿಯೋಗವು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಹತ್ವದ ಸಮಾಲೋಚನೆ ನಡೆಸಿತು.

ದೆಹಲಿಯ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಸಚಿವರೊಂದಿಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ, ಶಾಸಕರಾದ ಎನ್.ಎಚ್. ಕೋನರೆಡ್ಡಿ ಹಾಗೂ ಕೆ.ಎಸ್. ಬಸವಂತಪ್ಪ ಉಪಸ್ಥಿತರಿದ್ದರು. ರಾಜ್ಯದ ಪ್ರಚಲಿತ ವಿದ್ಯಮಾನಗಳು, ಪಕ್ಷದ ಸಂಘಟನೆ ಹಾಗೂ ಆಡಳಿತಾತ್ಮಕ ವಿಷಯಗಳ ಕುರಿತು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಯಿತು.

ಹೈಕಮಾಂಡ್ ನಿರ್ಧಾರ ಅಂತಿಮ:

ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,”ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಗೊಂದಲಕಾರಿ ಹೇಳಿಕೆಗಳು ಹಾಗೂ ಪಕ್ಷದ ಆಂತರಿಕ ವಿದ್ಯಮಾನಗಳ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ವಿವರವಾದ ಮಾಹಿತಿ ನೀಡಿದ್ದೇವೆ. ಹೈಕಮಾಂಡ್ ಈಗಾಗಲೇ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ,”. “ರಾಜ್ಯದ ನಾಯಕತ್ವ ಮತ್ತು ಇತ್ತೀಚಿನ ಗೊಂದಲಗಳ ಕುರಿತು ಹೈಕಮಾಂಡ್ ಈಗಾಗಲೇ ಒಂದು ಸ್ಪಷ್ಟ ತೀರ್ಮಾನಕ್ಕೆ ಬಂದಿದೆ ಎಂದು ಎಐಸಿಸಿ ಅಧ್ಯಕ್ಷರು ತಿಳಿಸಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಶೀಘ್ರದಲ್ಲೇ ಈ ಗೊಂದಲಗಳಿಗೆ ತೆರೆ ಬೀಳಲಿದೆ,” ಎಂದು ತಿಳಿಸಿದರು.

“ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷದ ವರ್ಚಸ್ಸು ಮುಖ್ಯ. ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ವಹಿಸಲು ಚರ್ಚಿಸಿದ್ದೇವೆ. ಪಕ್ಷದ ಶಿಸ್ತು ಉಲ್ಲಂಘಿಸುವವರ ಬಗ್ಗೆ ಹೈಕಮಾಂಡ್ ಕಠಿಣ ನಿಲುವು ತಳೆಯಲಿದೆ,” ಎಂಬ ಸುಳಿವು ನೀಡಿದರು.ಸಚಿವರು ಮತ್ತು ಶಾಸಕರ ನಡುವಿನ ಸಮನ್ವಯತೆ ಹಾಗೂ ಪಕ್ಷ ಸಂಘಟನೆಯ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುತ್ತೇವೆ, ಎಂದರು

ರಾಜಕೀಯ ಕುತೂಹಲ:

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಥವಾ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಅವರ ಆಪ್ತ ವಲಯದ ಈ ನಾಯಕರು ಹೈಕಮಾಂಡ್ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸರ್ಕಾರ ಮತ್ತು ಪಕ್ಷದ ನಡುವಿನ ಸಮನ್ವಯತೆಯ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


Share this with Friends

Related Post