ಬೆಂಗಳೂರು: “ಕನ್ನಡವೇ ಜಾತಿ, ಕನ್ನಡವೇ ಧರ್ಮ” ಎಂಬ ಉನ್ನತ ಆಶಯದೊಂದಿಗೆ ರಾಜ್ಯದ ಆಡಳಿತ ನಡೆಯಬೇಕು ಮತ್ತು ರಾಜ್ಯ ಸರ್ಕಾರವು ತಕ್ಷಣವೇ ಪ್ರತ್ಯೇಕ ‘ಕನ್ನಡ ಬಜೆಟ್’ ಮಂಡಿಸಬೇಕು ಎಂದು ವಿವಿಧ ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.
ಪ್ರೆಸ್ ಕ್ಲಬ್‌ನಲ್ಲಿಂದು ಮಹತ್ವದ ಪತ್ರಿಕಾಗೋಷ್ಠಿ ನಡೆಸಿದ ಕನ್ನಡ ಚಳವಳಿ ಕೇಂದ್ರ ಸಮಿತಿ ಮತ್ತು ನಮ್ಮ ಕನ್ನಡಿಗರ ವಿಜಯ ಸೇನೆಯ ಪ್ರಮುಖರು, ಸರ್ಕಾರದ ಮುಂದೆ ಹಲವು ಕ್ರಾಂತಿಕಾರಿ ಬೇಡಿಕೆಗಳನ್ನು ಮಂಡಿಸಿದರು.
ಉದ್ಯೋಗ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ:
ಕನ್ನಡ ಮಾಧ್ಯಮದಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿ ಆದ್ಯತೆ ನೀಡಬೇಕು ಹಾಗೂ ಉನ್ನತ ಶಿಕ್ಷಣದ ಪ್ರವೇಶಾತಿಯಲ್ಲಿ ಶೇ. 25ರಷ್ಟು ಮೀಸಲಾತಿ ಕಲ್ಪಿಸಬೇಕು. ಅಲ್ಲದೆ, ರಾಜಧಾನಿಯ ಐಟಿ (IT) ಕಂಪನಿಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಶೇ. 25ರಷ್ಟು ಉದ್ಯೋಗ ಮೀಸಲಾತಿ ನೀಡಬೇಕೆಂದು ನಿಯೋಗ ಒತ್ತಾಯಿಸಿತು.
ಆಡಳಿತದಲ್ಲಿ ಕನ್ನಡ ಮತ್ತು ಸ್ವಾಯತ್ತತೆ:
ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೇರ್ಪಡಿಸಿ, ಅದಕ್ಕೆ ಸಂಪೂರ್ಣ ಸ್ವಾಯತ್ತತೆ ನೀಡಬೇಕು. ಜೊತೆಗೆ ಪ್ರಾಧಿಕಾರಕ್ಕೆ 1,000 ಕೋಟಿ ರೂ. ಅನುದಾನ ನೀಡುವ ಮೂಲಕ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ಜಾರಿಗೆ ತರಬೇಕು. ಇ-ಆಡಳಿತದಲ್ಲಿ ಸಂಪೂರ್ಣ ಕನ್ನಡ ಜಾರಿಗೆ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂದು ಆಗ್ರಹಿಸಲಾಯಿತು.
ಸಾಂಸ್ಕೃತಿಕ ಹಾಗೂ ಐತಿಹಾಸಿಕ ಬೇಡಿಕೆಗಳು:
ವಿಧಾನಸೌಧದ ಮುಂಭಾಗ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯ ಪ್ರತಿಮೆ ಸ್ಥಾಪಿಸಬೇಕು.
ಕನ್ನಡ ರಾಜಮನೆತನಗಳ ಇತಿಹಾಸವನ್ನು ಪಠ್ಯಪುಸ್ತಕಗಳಲ್ಲಿ ಕಡ್ಡಾಯವಾಗಿ ಸೇರಿಸಬೇಕು.
ಕನ್ನಡ, ಗೋಕಾಕ್, ರೈತ ಹಾಗೂ ದಲಿತ ಚಳವಳಿಗಳ ಸ್ಮರಣಾರ್ಥ ವಿಶೇಷ ಥೀಮ್ ಪಾರ್ಕ್ ನಿರ್ಮಿಸಬೇಕು.
ಶಿಕ್ಷಣ ವ್ಯವಸ್ಥೆಯಲ್ಲಿ ತ್ರಿಭಾಷಾ ನೀತಿಯ ಬದಲು ‘ದ್ವಿಭಾಷಾ ನೀತಿ’ ಅಳವಡಿಸಿಕೊಳ್ಳಬೇಕು.
ಸರ್ಕಾರಿ ಶಾಲೆಗಳ ಸಂರಕ್ಷಣೆ:
ಯಾವುದೇ ಕಾರಣಕ್ಕೂ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಶಾಲೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ತಕ್ಷಣವೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣ್ ಕುಮಾರ್, ನಮ್ಮ ಕನ್ನಡಿಗರ ವಿಜಯ ಸೇನೆಯ ರಾಜ್ಯಾಧ್ಯಕ್ಷ ವಿಜಯಕುಮಾರ್ ಎಸ್, ರಾಜ್ಯ ಮುಖ್ಯ ಸಲಹೆಗಾರರಾದ ಮೋಹನ್ ಕುಮಾರ್ ಬಿ, ಪ್ರಮುಖರಾದ ಭೀಮಶಂಕರ್ ಪಾಟೀಲ್ ಹಾಗೂ ರಾಮ್ ಪ್ರಸಾದ್ ಗೌಡ ಉಪಸ್ಥಿತರಿದ್ದರು.

