Fri. Mar 6th, 2026

ಬಂಜಾರ ಸಮುದಾಯದ ಮೇಲೆ ಸರ್ಕಾರದ ದ್ವೇಷದ ರಾಜಕಾರಣ: ಬಿ.ವೈ. ವಿಜಯೇಂದ್ರ ಆಕ್ರೋಶ

Share this with Friends

ಬೆಂಗಳೂರು: ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಅವರ ಬಂಧನದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬಂಜಾರ ಸಮಾಜವನ್ನೇ ಗುರಿಯಾಗಿಸಿಕೊಂಡು ‘ಸೇಡಿನ ರಾಜಕಾರಣ’ ಮಾಡುತ್ತಿದೆ ಎಂದು ವಿಧಾನಸೌಧದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಂಜಾರ ಸಮುದಾಯವು ರಾಜಕೀಯವಾಗಿ ಬಿಜೆಪಿಯ ಬೆನ್ನಿಗೆ ನಿಂತಿರುವುದನ್ನು ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಈ ಸಮುದಾಯಕ್ಕೆ ಸತತವಾಗಿ ಅನ್ಯಾಯವಾಗುತ್ತಿದೆ. ಹಿಂದೆ ಡಿಸಿಎಂ ಅವರಿಗೆ ಈ ಸಮಾಜದ ಯುವಕರು ಪ್ರತಿಭಟಿಸಿದ ಕಾರಣಕ್ಕೆ ಈಗ ಸೇಡು ತೀರಿಸಿಕೊಳ್ಳುವ ತಂತ್ರಗಳು ನಡೆಯುತ್ತಿವೆ,” ಎಂದು ಆಕ್ರೋಶ ಹೊರಹಾಕಿದರು.

ಭ್ರಷ್ಟಾಚಾರದ ಟೀಕೆಗೆ ತಿರುಗೇಟು:

ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳಿಗೆ ಕಟುವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, “ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆಗೆ ಬಳಸಿಕೊಂಡವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರ ಹೇಳಿಕೆಗಳು ‘ಭೂತದ ಬಾಯಲ್ಲಿ ಭಗವದ್ಗೀತೆ’ ಎನ್ನುವಂತಿದೆ. ಶಾಸಕರ ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋಗಳ ಸತ್ಯಾಸತ್ಯತೆ ತನಿಖೆಯಾಗಲಿ, ಕಾನೂನಿನ ಮೇಲೆ ನಮಗೆ ಗೌರವವಿದೆ,” ಎಂದರು.

ನಿಗಮಗಳಿಗೆ ಅನುದಾನ ನೀಡಲು ಆಗ್ರಹ:

ಇದೇ ವೇಳೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಅವರು,ಕುರಿ ಕಾಯೋರು ಸಿಎಂ‌ ಆಗಿದ್ದಾರೆ ಸಂತೋಷ ಆದರೆ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಸೂಕ್ತ ಅನುದಾನ ಮೀಸಲಿಡುವ ಮೂಲಕ ಸಮುದಾಯದ ಏಳಿಗೆಗೆ ಸ್ಪಂದಿಸಲಿ, ಎಂದು ಹಕ್ಕೊತ್ತಾಯ ಮಾಡಿದರು.

ಬಜೆಟ್ ಅಧಿವೇಶನದ ಬಗ್ಗೆ ಚರ್ಚೆ:

ಬಜೆಟ್ ಅಧಿವೇಶನ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗುತ್ತಿದೆ ಇದರ ಬಗ್ಗೆ ನಾನು, ಆರ್ ಅಶೋಕ್ ಅವರು ಸದನ‌ ಹೇಗೆ ಮುನ್ನಡೆಸಬೇಕು ಅಂತ ಚರ್ಚೆ ಮಾಡುತ್ತೇವೆ ತದನಂತರ ಎಲ್ಲಾ ವಿಚಾರಗಳನ್ನು  ಪ್ರಮುಖರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇವೆ ಎಂದರು.

 


Share this with Friends

Related Post