ಬೆಂಗಳೂರು: ಇತ್ತೀಚೆಗೆ ನಡೆದ ಸಿವಿಲ್ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯಲ್ಲಿ ಕೆ.ಬಿ. ರೋಶ್ನಿ ಅವರು ನ್ಯಾಯಾಧೀಶರ ಹುದ್ದೆಗೆ ಐದನೇ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ. ಅತ್ಯಂತ ಕಠಿಣ ಹಾಗೂ ಸ್ಪರ್ಧಾತ್ಮಕವಾಗಿರುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಾವಿರಾರು ಅಭ್ಯರ್ಥಿಗಳ ನಡುವೆ ತಮ್ಮ ಪ್ರತಿಭೆ, ಪರಿಶ್ರಮ ಮತ್ತು ದೃಢ ಸಂಕಲ್ಪದ ಮೂಲಕ ಕೆ.ಬಿ. ರೋಷಣಿ ಅವರು ಯಶಸ್ಸಿನ ಮೆಟ್ಟಿಲೇರಿದ್ದಾರೆ.
ನ್ಯಾಯಾಂಗ ಸೇವಾ ಪರೀಕ್ಷೆಯ ಪೂರ್ವಭಾವಿ, ಮುಖ್ಯ ಪರೀಕ್ಷೆಗಳು ಹಾಗೂ ಸಂದರ್ಶನ ಹಂತಗಳನ್ನು ಸಮರ್ಥವಾಗಿ ಎದುರಿಸಿದ ಅವರು, ಕಾನೂನು ಜ್ಞಾನ, ತಾರ್ಕಿಕ ಚಿಂತನೆ, ನ್ಯಾಯಬದ್ಧ ದೃಷ್ಟಿಕೋಣ ಮತ್ತು ವ್ಯಕ್ತಿತ್ವದ ದೃಢತೆಯಿಂದ ಈ ಪರೀಕ್ಷೆಯಲ್ಲಿ ಗಳಿಸಿದ್ದಾರೆ.
ಮೂಲತಃ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಹಾತೂರು ಗ್ರಾಮದವರು ತಂದೆ ಬಿದ್ದಪ್ಪ ರವರು ನಿವೃತ್ತ ಬಿಎಸ್ಎಫ್ ಅಧಿಕಾರಿ ತಾಯಿ ರೇಣು ಎಲ್ಐಸಿಯಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಹಾಲಿ ಬೋಗಧಿಯಲ್ಲಿ ವಾಸವಾಗಿದ್ದಾರೆ
ಇವರು ತಮ್ಮ ಪ್ರಾರಂಬಿಕ ಶಾಲಾ ಶಿಕ್ಷಣವನ್ನು ಮಡಿಕೇರಿಯ ಭಾರತೀಯ ವಿದ್ಯಾ ಭವನ, ಪಿ.ಯು.ಶಿಕ್ಷಣವನ್ನು ಶಿವಮೊಗ್ಗದ ಅರಬಿಂದೊ ಪಿ.ಯು.ಕಾಲೇಜಿನಲ್ಲಿ, ಮೈಸೂರಿನ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ BA LLB ಮತ್ತು ಬೆಂಗಳೂರಿನ ಕ್ರೈಸ್ಟ ವಿಶ್ವವಿದ್ಯಾನಿಲಯದಲ್ಲಿ LLM ಪದವಿಯನ್ನು ಪಡೆದರು. ಹಾಲಿ ಮೈಸೂರಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದರು
ವಿದ್ಯಾರ್ಥಿ ಜೀವನದಿಂದಲೇ ಅಧ್ಯಯನಶೀಲತೆ, ಶಿಸ್ತು ಹಾಗೂ ಸಮಾಜದ ದುರ್ಬಲ ವರ್ಗಗಳ ಬಗ್ಗೆ ಕಾಳಜಿ ಹೊಂದಿದ್ದ ರೋಷಣಿ ಅವರ ಈ ಸಾಧನೆ, ನಿರಂತರ ಪರಿಶ್ರಮಕ್ಕೆ ದೊರೆತ ಫಲವೆಂದು ಅವರ ಪೋಷಕರು ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಣದ ಅವಧಿಯಲ್ಲಿ ಸಂವಿಧಾನಾತ್ಮಕ ಮೌಲ್ಯಗಳು, ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ನೈತಿಕತೆಗಳ ಮೇಲೆ ವಿಶೇಷ ಆಸಕ್ತಿ ತೋರಿದ ಅವರು, ಭವಿಷ್ಯದಲ್ಲಿ ನ್ಯಾಯಾಧೀಶರಾಗಿ ಪಾರದರ್ಶಕ, ನಿರ್ಭಯ ಹಾಗೂ ಜನಪರ ನ್ಯಾಯ ವಿತರಣೆ ಮಾಡುವ ಸಂಕಲ್ಪ ವ್ಯಕ್ತಪಡಿಸಿದ್ದಾರೆ. “ನ್ಯಾಯವೆಂದರೆ ಕೇವಲ ತೀರ್ಪು ನೀಡುವುದಲ್ಲ, ಸಮಾಜದಲ್ಲಿ ಸಮತೆ ಮತ್ತು ನಂಬಿಕೆಯನ್ನು ಬಲಪಡಿಸುವ ಸಾಧನ” ಎಂಬ ಅವರ ದೃಷ್ಟಿಕೋಣ ಹಲವರ ಗಮನ ಸೆಳೆದಿದೆ ಹಾಗೂ ಈ ಮಹತ್ವದ ಸಾಧನೆಗೆ ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ರವರು ಅಭಿನಂದನೆ ಸಲ್ಲಿಸಿದ್ದಾರೆ.
ಸಹಾಯಕ ಪ್ರೊಫೆಸರ್ ಹುದ್ದೆಗಾಗಿ ನಡೆದ KSET Law ಪರೀಕ್ಷೆಯಲ್ಲಿ ಸಹಾ ಇವರು ಉತ್ತೀರ್ಣರಾಗಿದ್ದಾರೆ. ಉಪನ್ಯಾಸಕರಾಗಿ ಸೇವೆ ಸಲ್ಲಿಸಬೇಕೆಂಬ ಹಂಬಲ ಇತ್ತು.
ಯುವ ಕಾನೂನು ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಕೆ.ಬಿ. ರೋಶ್ನಿ ಅವರ ಯಶೋಗಾಥೆ ಮಹತ್ತರ ಪ್ರೇರಣೆಯಾಗಿ ಪರಿಣಮಿಸಿದೆ. ಶ್ರಮ, ಶಿಸ್ತು ಮತ್ತು ಸ್ಪಷ್ಟ ಗುರಿ ಇದ್ದರೆ ಯಾವುದೇ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ಅವರ ಆಯ್ಕೆ ಜೀವಂತ ಉದಾಹರಣೆಯಾಗಿದೆ.

