Fri. Mar 6th, 2026

ನರೇಗಾ ರಕ್ಷಣೆಗಾಗಿ ಸಿಎಂ, ಡಿಸಿಎಂ ವಿನೂತನ ಸತ್ಯಾಗ್ರಹ: ತಲೆ ಮೇಲೆ ಪುಟ್ಟಿ ಹೊತ್ತು ಕೇಂದ್ರದ ವಿರುದ್ಧ ಸಮರ

Share this with Friends

ಚಿಕ್ಕಬಳ್ಳಾಪುರ: ಗ್ರಾಮೀಣ ಭಾಗದ ಬಡವರ ಬದುಕಿನ ಆಧಾರವಾಗಿದ್ದ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಹಂತಹಂತವಾಗಿ ಕೊಲ್ಲುತ್ತಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಲ್ಲಿನ ಎಂ.ವಿ. ಕ್ರೀಡಾಂಗಣದಲ್ಲಿ ತಲೆಯ ಮೇಲೆ ಖಾಲಿ ಪುಟ್ಟಿ (ಬುಟ್ಟಿ) ಹೊತ್ತು ವಿಭಿನ್ನ ಪ್ರತಿಭಟನೆ ನಡೆಸಿದರು.

ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ನರೇಗಾ ಕಾರ್ಮಿಕರ ನಡುವೆ ಹಸಿರು ಶಾಲು ಹೊದ್ದು ಬಂದ ಸಿಎಂ ಹಾಗೂ ಡಿಸಿಎಂ, ಸಾಂಕೇತಿಕವಾಗಿ ಕೆಲಸದ ಪುಟ್ಟಿಗಳನ್ನು ತಲೆಯ ಮೇಲೆ ಹೊತ್ತು ವೇದಿಕೆ ಮೇಲೆ ನಡೆದು ಬಂದರು. “ನರೇಗಾ ಕಾರ್ಮಿಕರ ಹೊಟ್ಟೆ ಮೇಲೆ ಕೇಂದ್ರ ಸರ್ಕಾರ ಹೊಡೆಯುತ್ತಿರುವುದಕ್ಕೆ ಈ ಖಾಲಿ ಪುಟ್ಟಿಗಳೇ ಸಾಕ್ಷಿ” ಎಂದು ಈ ಸಂದರ್ಭದಲ್ಲಿ ಬಣ್ಣಿಸಿದರು.

ನರೇಗಾ ಬಚಾವ್’ ಬೃಹತ್ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ,”ಕೇಂದ್ರದ ತಾರತಮ್ಯ ಧೋರಣೆಯಿಂದಾಗಿ ದೇಶಾದ್ಯಂತ ಸುಮಾರು 16.12 ಕೋಟಿ ಕಾರ್ಮಿಕರು ನರೇಗಾ ಕೆಲಸದಿಂದ ವಂಚಿತರಾಗಿದ್ದಾರೆ. ಇದರಲ್ಲಿ ಶೇ. 53 ರಷ್ಟು ಮಹಿಳೆಯರು ಹಾಗೂ ಶೇ. 28 ರಷ್ಟು ದಲಿತ ಮತ್ತು ಹಿಂದುಳಿದ ವರ್ಗದವರಿದ್ದಾರೆ. ಹಳ್ಳಿಗಳ ಬಡವರು ನಗರಗಳಿಗೆ ಗುಳೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಸಿಎಂ ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ:

“ಕೇಂದ್ರ ಸರ್ಕಾರ ಕೇವಲ ಶ್ರೀಮಂತರ ಪರವಾಗಿದೆ. ಬಡವರ ಹಸಿವು ನೀಗಿಸುವ ಅಕ್ಕಿ ಯೋಜನೆಗೆ ಅಡ್ಡಿಪಡಿಸಿದರು, ಈಗ ಕೆಲಸ ನೀಡುವ ಉದ್ಯೋಗ ಖಾತರಿಗೂ ಕಲ್ಲು ಹಾಕುತ್ತಿದ್ದಾರೆ. ಗ್ರಾಮೀಣ ಭಾಗದ ಜನರೇ ಮುಂದಿನ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಗುಡುಗಿದರು.

ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಲ್ಲ:

ಗ್ರಾಮೀಣ ಪ್ರದೇಶದ ಶ್ರಮಿಕ ವರ್ಗದ ಆಧಾರಸ್ತಂಭವಾಗಿದ್ದ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಹಂತ ಹಂತವಾಗಿ ದುರ್ಬಲಗೊಳಿಸುತ್ತಿರುವುದನ್ನು ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ನೇರ ಸವಾಲು ಹಾಕಿದ್ದು, “ನರೇಗಾ ಯೋಜನೆಯನ್ನು ಮೊದಲಿನಂತೆಯೇ ಮರುಜಾರಿಗೊಳಿಸುವವರೆಗೆ ನಮ್ಮ ಹೋರಾಟ ವಿಶ್ರಮಿಸದು”ಎಂದರು.ನಮ್ಮ ಹೋರಾಟಕ್ಕೆ ರಾಜ್ಯದ ಜನತೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಜೂನ್ ಒಳಗೆ ಪಂಚಾಯತ್ ಚುನಾವಣೆ:

ಗ್ರಾಮೀಣಾಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಅವರು, “ರಾಜ್ಯದಲ್ಲಿ ಬಾಕಿ ಇರುವ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಬರುವ ಜೂನ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು” ಎಂದು ಘೋಷಿಸಿದರು. ಇದು ಸ್ಥಳೀಯ ಆಡಳಿತಕ್ಕೆ ಹೊಸ ಶಕ್ತಿ ನೀಡಲಿದೆ ಎಂದರು.

ಬಡವರ ಗ್ಯಾರಂಟಿ ಯೋಜನೆಗಳು ಸದಾ ಶಾಶ್ವತ; ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ,”ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಬಡವರ ಬದುಕಿಗೆ ಆಸರೆಯಾಗಿರುವ ಈ ಯೋಜನೆಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ವಿರೋಧ ಪಕ್ಷಗಳಿಗೆ ದೃಢವಾದ ಸಂದೇಶ ನೀಡಿದರು. ರಾಜ್ಯದ ಅಭಿವೃದ್ಧಿ ಮತ್ತು ಜನರ ಹಿತರಕ್ಷಣೆಯ ವಿಚಾರದಲ್ಲಿ ಸರ್ಕಾರ ಹಿಂದೆ ಸರಿಯುವ ಪ್ರಶ್ನೆಯೇ “ಬಿಜೆಪಿ ನಾಯಕರು ಹಗಲಿರುಳು ಗ್ಯಾರಂಟಿಗಳು ನಿಲ್ಲುತ್ತವೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. ಶಕ್ತಿ, ಗೃಹಲಕ್ಷ್ಮಿ ಸೇರಿದಂತೆ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ಮುಂದುವರಿಯಲಿವೆ” ಎಂದು ಭರವಸೆ ನೀಡಿದರು.

 


Share this with Friends

Related Post