Fri. Mar 6th, 2026

ಭಿಕ್ಷುಕರ ಕಲ್ಯಾಣದ ಹಣಕ್ಕೂ ಕಾಂಗ್ರೆಸ್ ಸರ್ಕಾರ ಕನ್ನ: ಆರ್. ಅಶೋಕ್ ಗಂಭೀರ ಆರೋಪ

Share this with Friends

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಗಳಾದ ಭಿಕ್ಷುಕರ ಪುನರ್ವಸತಿಗಾಗಿ ಮೀಸಲಿಟ್ಟ ‘ಭಿಕ್ಷುಕರ ಉಪಕರ’ವನ್ನು (Beggars Cess) ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಬಡವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಈಗ ದೀನ-ದಲಿತರ ಮತ್ತು ಭಿಕ್ಷುಕರ ಹಸಿವು ನೀಗಿಸಬೇಕಾದ ಹಣವನ್ನೂ ಲೂಟಿ ಮಾಡುತ್ತಿದೆ. ಇದು ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಎಂದು ಟೀಕಿಸಿದ್ದಾರೆ.

ಸಾವಿರಾರು ಕೋಟಿ ಬಾಕಿ:

ಬಿಬಿಎಂಪಿಯಿಂದ ಸಂಗ್ರಹವಾಗಿರುವ 256 ಕೋಟಿ ರೂ. ಆರೋಗ್ಯ ಸೆಸ್ ಹಾಗೂ 218 ಕೋಟಿ ರೂ. ಗ್ರಂಥಾಲಯ ಸೆಸ್ ಸೇರಿದಂತೆ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಪಾವತಿಸದೆ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

ಪಂಚಾಯತ್ ಹಣದ ಕಣ್ಮರೆ:

2024-25ನೇ ಸಾಲಿನಲ್ಲಿ ಗ್ರಾಮ ಪಂಚಾಯತ್‌ಗಳು ಸಂಗ್ರಹಿಸಿದ 72.82 ಕೋಟಿ ರೂಪಾಯಿಯಲ್ಲಿ ಕೇವಲ 21.55 ಕೋಟಿ ರೂ. ಮಾತ್ರ ಜಮೆಯಾಗಿದೆ. ಉಳಿದ 51 ಕೋಟಿ ರೂಪಾಯಿ ಹಣ ಎಲ್ಲಿ ಹೋಯಿತು? ಎಂದು ಅವರು ಪ್ರಶ್ನಿಸಿದ್ದಾರೆ.

ಹೈಕೋರ್ಟ್ ತರಾಟೆ:

ರಾಜ್ಯದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 720 ಮಕ್ಕಳನ್ನು ಗುರುತಿಸಿದ್ದರೂ ಅವರ ಪುನರ್ವಸತಿಗೆ ಸರ್ಕಾರ ಮುಂದಾಗುತ್ತಿಲ್ಲ. ಹೈಕೋರ್ಟ್ ಈ ಬಗ್ಗೆ ಚಾಟಿ ಬೀಸಿದರೂ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಿಕ್ಷುಕರ ಕಲ್ಯಾಣಕ್ಕೆ ಮೀಸಲಿಟ್ಟ ಶೇ.50ರಷ್ಟು ಹಣವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಲು ಸರ್ಕಾರ ಹೊಂಚು ಹಾಕುತ್ತಿದೆ. ಕೂಡಲೇ ಬಾಕಿ ಇರುವ ಎಲ್ಲಾ ಸೆಸ್ ಹಣವನ್ನು ಕೇಂದ್ರ ಪರಿಹಾರ ಸಮಿತಿಗೆ ಬಿಡುಗಡೆ ಮಾಡಬೇಕು ಮತ್ತು ಮಕ್ಕಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಅವರು ಎಚ್ಚರಿಸಿದ್ದಾರೆ.


Share this with Friends

Related Post