Fri. Mar 6th, 2026

ಕಬ್ಬು ಬೆಳೆಗಾರರ ಖಾತೆಗೆ ಶೀಘ್ರವೇ ₹300 ಕೋಟಿ ಜಮೆ: ಸಚಿವ ಶಿವಾನಂದ ಪಾಟೀಲ

Share this with Friends

ಬೆಂಗಳೂರು: ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರಿಗೆ ನೀಡಿದ್ದ ಭರವಸೆಯಂತೆ 2025-26ನೇ ಸಾಲಿನ ಹಂಗಾಮಿಗೆ ಪ್ರತಿ ಟನ್‌ಗೆ ₹50 ರಂತೆ ಒಟ್ಟು ₹300 ಕೋಟಿ ಆರ್ಥಿಕ ನೆರವನ್ನು ಬಿಡುಗಡೆ ಮಾಡಿದೆ ಎಂದು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು, ಕಳೆದ ನವೆಂಬರ್‌ನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಫ್‌ಆರ್‌ಪಿ (FRP) ದರದ ಮೇಲೆ ಹೆಚ್ಚುವರಿಯಾಗಿ ₹100 ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿತ್ತು. ಈ ಪೈಕಿ ರಾಜ್ಯ ಸರ್ಕಾರ ತನ್ನ ಪಾಲಿನ ₹50 ಹಣವನ್ನು ಬಿಡುಗಡೆ ಮಾಡಿದ್ದು, ಉಳಿದ ₹50 ಅನ್ನು ಸಂಬಂಧಪಟ್ಟ ಸಕ್ಕರೆ ಕಾರ್ಖಾನೆಗಳು ಪಾವತಿಸಲಿವೆ ಎಂದರು.

ನೇರ ನಗದು ವರ್ಗಾವಣೆ (DBT):

ಕಬ್ಬು ಅಭಿವೃದ್ಧಿ ಆಯುಕ್ತರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದು, ರೈತರು ಪೂರೈಸಿದ ಕಬ್ಬಿನ ಪ್ರಮಾಣಕ್ಕೆ ಅನುಗುಣವಾಗಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಲಿದೆ. ಈ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

600 ಲಕ್ಷ ಮೆಟ್ರಿಕ್ ಟನ್ ಗುರಿ:

“ಪ್ರಸಕ್ತ ಸಾಲಿನಲ್ಲಿ ಒಟ್ಟು 81 ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯದಲ್ಲಿ ತೊಡಗಿದ್ದು, ಮಾರ್ಚ್ ಮೊದಲ ವಾರದೊಳಗೆ ಈ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಸುಮಾರು 600 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಅಂದಾಜಿನ ಮೇಲೆ ಈ ₹300 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ” ಎಂದು ಸಚಿವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ. ಕಾರ್ಖಾನೆಗಳು ಸಹ ತಮ್ಮ ಪಾಲಿನ ಹಣವನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.


Share this with Friends

Related Post