ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಮತ್ತು ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ‘ಬೆಂಗಳೂರು ಉತ್ತರ ನಗರ ಪಾಲಿಕೆ’ಯು (Bengaluru North City Corporation) ಪ್ರಾಣಿ ಜನನ ನಿಯಂತ್ರಣ (ABC) ಕಾರ್ಯಕ್ರಮವನ್ನು ಚುರುಕುಗೊಳಿಸಿದೆ.
ಕೇಂದ್ರ ಸರ್ಕಾರದ ABC ಕಾಯ್ದೆ 2023ರ ಮಾರ್ಗಸೂಚಿಗಳ ಅನ್ವಯ, ಬೀದಿ ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ವಿರೋಧಿ ಲಸಿಕೆ (ARV) ನೀಡಿದ ಬಳಿಕ, ಅವುಗಳನ್ನು ಹಿಡಿದ ಜಾಗಕ್ಕೇ ಮರಳಿ ಬಿಡಲಾಗುತ್ತಿದೆ. ಇದು ಕಾನೂನಾತ್ಮಕವಾಗಿ ಕಡ್ಡಾಯ ಎಂದು ಪಾಲಿಕೆ ಸ್ಪಷ್ಟಪಡಿಸಿದೆ.
ಅದೇ ಜಾಗಕ್ಕೆ ಏಕೆ ಬಿಡಬೇಕು?
ನಾಯಿಗಳು ಪ್ರಾದೇಶಿಕ ಸ್ವಭಾವವನ್ನು ಹೊಂದಿರುತ್ತವೆ. ಒಂದು ಪ್ರದೇಶದಿಂದ ನಾಯಿಯನ್ನು ಸ್ಥಳಾಂತರಿಸಿದರೆ, ಆ ಜಾಗಕ್ಕೆ ಬೇರೆ ಕಡೆಯಿಂದ ಲಸಿಕೆ ಪಡೆಯದ ಅಥವಾ ಆಕ್ರಮಣಕಾರಿ ನಾಯಿಗಳು ಬರುವ ಸಾಧ್ಯತೆ ಇರುತ್ತದೆ. ಇದರಿಂದ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಬಹುದು. ನಾಯಿಗಳನ್ನು ಹಳೆಯ ಜಾಗಕ್ಕೇ ಬಿಡುವುದರಿಂದ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.
ಸಾರ್ವಜನಿಕರಿಗೆ ಕಿವಿಮಾತು:
ಯಾವ ನಾಯಿಗಳ ಕಿವಿಯಲ್ಲಿ ಕತ್ತರಿಸಿದ ಗುರುತು (Ear Notch) ಇರುತ್ತದೆಯೋ, ಅಂತಹ ನಾಯಿಗಳಿಗೆ ಈಗಾಗಲೇ ಸಂತಾನಹರಣ ಚಿಕಿತ್ಸೆ ಪೂರ್ಣಗೊಂಡಿದೆ ಎಂದು ಅರ್ಥ. ಇಂತಹ ನಾಯಿಗಳನ್ನು ಹಿಂಸಿಸುವುದು ಅಥವಾ ಬೇರೆಡೆಗೆ ಸ್ಥಳಾಂತರಿಸುವುದು ಕಾನೂನುಬಾಹಿರವಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಾಲ ಸುನಿಲ್ ಕುಮಾರ್ ಅವರು ಈ ಬಗ್ಗೆ ಪ್ರತಿನಿಧಿಸಿ, “ಬೀದಿ ನಾಯಿಗಳ ನಿಯಂತ್ರಣ ಕಾರ್ಯಕ್ರಮ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ನಾಗರಿಕರು ಪಾಲಿಕೆಯೊಂದಿಗೆ ಕೈಜೋಡಿಸಬೇಕು” ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಅಥವಾ ದೂರುಗಳಿಗಾಗಿ ಸಹಾಯವಾಣಿ 1533 ಅಥವಾ ಇಮೇಲ್ adyelahanka@gmail.com ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.

