ಬೆಂಗಳೂರು: ರಾಜ್ಯದ ರಕ್ತ ಕೇಂದ್ರಗಳ (Blood Banks) ಸಮರ್ಪಕ ನಿರ್ವಹಣೆ ಮತ್ತು ರಕ್ತದ ಮೂಲಕ ಹರಡಬಹುದಾದ ಸೋಂಕುಗಳನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
ರಕ್ತದ ಗುಣಮಟ್ಟ ಪರಿಶೀಲನೆ ಹಾಗೂ ಪೂರೈಕೆಯಲ್ಲಿ ಪಾರದರ್ಶಕತೆ ತರಲು ಪ್ರತಿ ಜಿಲ್ಲೆಗೆ ‘ಜಿಲ್ಲಾ ರಕ್ತ ವರ್ಗಾವಣಾ ಅಧಿಕಾರಿ’ಗಳನ್ನು (District Blood Transfusion Officers) ನೇಮಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಯಾರಿಗೆ ಜವಾಬ್ದಾರಿ?:
ಸರ್ಕಾರದ ಆದೇಶದಂತೆ, ಆಯಾ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜುಗಳ ರಕ್ತ ವರ್ಗಾವಣಾ ವಿಭಾಗದ ಮುಖ್ಯಸ್ಥರು (HoD) ಅಥವಾ ಹಿರಿಯ ಪ್ರಾಧ್ಯಾಪಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಒಂದು ವೇಳೆ ಈ ಅಧಿಕಾರಿಗಳು ಲಭ್ಯವಿಲ್ಲದಿದ್ದಲ್ಲಿ, ರೋಗಶಾಸ್ತ್ರ ವಿಭಾಗದ (Pathology) ಮುಖ್ಯಸ್ಥರು ಅಥವಾ ರಕ್ತ ನಿಧಿ ಅಧಿಕಾರಿಗಳನ್ನು ನೇಮಿಸಲಾಗುವುದು. ವೈದ್ಯಕೀಯ ಕಾಲೇಜು ಇಲ್ಲದ ಜಿಲ್ಲೆಗಳಲ್ಲಿ ನೆರೆಯ ಜಿಲ್ಲೆಯ ಅಧಿಕಾರಿಗಳಿಗೆ ಈ ಜವಾಬ್ದಾರಿ ವಹಿಸಲು ನಿರ್ಧರಿಸಲಾಗಿದೆ.
ಪ್ರಮುಖ ಕಾರ್ಯಗಳು:
ನೇಮಕಗೊಂಡ ಅಧಿಕಾರಿಗಳು ಜಿಲ್ಲೆಯ ರಕ್ತ ಕೇಂದ್ರಗಳು ಔಷಧ ನಿಯಂತ್ರಣ ಕಾಯ್ದೆ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ರಕ್ತ ಚಾಲನಾ ಪರಿಷತ್ತಿನ ನಿಯಮಾವಳಿಗಳಂತೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ನಿಗದಿತ ಪ್ರಮಾಣಿತ ಕಾರ್ಯಾಚರಣ ವಿಧಾನ (SOP) ಪಾಲನೆಯಾಗುತ್ತಿದೆಯೇ ಎಂದು ತಪಾಸಣೆ ನಡೆಸಿ, ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್‌ಗೆ ಕಾಲಕಾಲಕ್ಕೆ ವರದಿ ಸಲ್ಲಿಸುವುದು ಇವರ ಮುಖ್ಯ ಕರ್ತವ್ಯವಾಗಿದೆ.
ರೋಗಿಗಳಿಗೆ ಗುಣಮಟ್ಟದ ರಕ್ತ ಪೂರೈಕೆಯಾಗುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಮತಿಯೊಂದಿಗೆ ಈ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.

