ಬೆಂಗಳೂರು: ಸಿಲಿಕಾನ್ ಸಿಟಿಯ ಉತ್ತರ ಭಾಗಕ್ಕೆ ಈಗ ಹೊಸ ಕಳೆ ನೀಡುವ ಸಮಯ. ಕೇವಲ ಪೌರಕಾರ್ಮಿಕರ ಕೆಲಸವಾಗಿದ್ದ ‘ಸ್ವಚ್ಛತೆ’ಯನ್ನು ಈಗ ಮನೆಮನೆಯ ಅಭಿಯಾನವನ್ನಾಗಿ ಮಾಡಲು ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಸೊಂಟ ಕಟ್ಟಿ ನಿಂತಿದೆ. ಸ್ವಚ್ಛ ಸರ್ವೇಕ್ಷಣೆ 2025-26ರ ಹಿನ್ನೆಲೆಯಲ್ಲಿ ಆಯುಕ್ತರಾದ ಪೊಮ್ಮಾಲ ಸುನಿಲ್ ಕುಮಾರ್ ಅವರ ಸಾರಥ್ಯದಲ್ಲಿ ಮಾರ್ಚ್ 1 ರಿಂದ ‘ಮೆಗಾ ಸ್ವಚ್ಛತಾ ಅಭಿಯಾನ’ಕ್ಕೆ ಚಾಲನೆ ಸಿಗುತ್ತಿದೆ.
ಏನಿದು ವಿಶೇಷ ಅಭಿಯಾನ?
ಕೇವಲ ರಸ್ತೆ ಗುಡಿಸುವುದಕ್ಕೆ ಈ ಅಭಿಯಾನ ಸೀಮಿತವಾಗಿಲ್ಲ. ನಗರದ ಅಂದಗೆಡಿಸುತ್ತಿರುವ ‘ಬ್ಲಾಕ್ ಸ್ಪಾಟ್’ (ಕಸ ಸುರಿಯುವ ಜಾಗ) ಗಳನ್ನು ಪತ್ತೆಹಚ್ಚಿ, ಅಲ್ಲಿ ಕಸ ತೆಗೆಯುವುದು ಮಾತ್ರವಲ್ಲದೆ, ಆ ಜಾಗದಲ್ಲಿ ರಂಗೋಲಿ ಅಥವಾ ಗಿಡಗಳನ್ನು ಇಟ್ಟು ಸೌಂದರ್ಯೀಕರಣಗೊಳಿಸುವ ವಿನೂತನ ಪ್ರಯತ್ನ ಇಲ್ಲಿದೆ. ವಾರ್ಡ್‌ಗಳ ಖಾಲಿ ನಿವೇಶನಗಳು, ಕೆರೆಗಳ ದಂಡೆ ಮತ್ತು ಪಾದಚಾರಿ ಮಾರ್ಗಗಳು ಈ ಆರು ದಿನಗಳಲ್ಲಿ ಸಂಪೂರ್ಣ ಶುದ್ಧಗೊಳ್ಳಲಿವೆ.
ಕಸದಿಂದ ರಸ: ರಿಚರ್ಡ್ ಪಾರ್ಕ್‌ನಲ್ಲಿ ‘ಕಾಂಪೋಸ್ಟ್ ಸಂತೆ’
ತ್ಯಾಜ್ಯ ವಿಲೇವಾರಿಯಲ್ಲಿ ಸ್ವಾವಲಂಬನೆ ಸಾಧಿಸಲು ಮಾರ್ಚ್ 7ರಂದು ಪುಲಿಕೇಶಿನಗರದ ರಿಚರ್ಡ್ ಪಾರ್ಕ್‌ನಲ್ಲಿ ‘ಕಾಂಪೋಸ್ಟ್ ಸಂತೆ’ ಆಯೋಜಿಸಲಾಗಿದೆ. ಮನೆಯ ಹಸಿ ಕಸದಿಂದ ಹೇಗೆ ಉತ್ತಮ ಗೊಬ್ಬರ ತಯಾರಿಸಬಹುದು ಎಂಬುದನ್ನು ತಜ್ಞರು ಇಲ್ಲಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಿದ್ದಾರೆ. ಇದು ತೋಟಗಾರಿಕೆ ಆಸಕ್ತರಿಗೆ ಮತ್ತು ಪರಿಸರ ಪ್ರೇಮಿಗಳಿಗೆ ದೊಡ್ಡ ವೇದಿಕೆಯಾಗಲಿದೆ.
ಹೆಜ್ಜೆ ಹಾಕಲಿವೆ ಮಹಿಳಾ ಶಕ್ತಿ:
ಅಭಿಯಾನದ ಸಮಾರೋಪದ ಅಂಗವಾಗಿ ಮಾರ್ಚ್ 8ರ ಮಹಿಳಾ ದಿನಾಚರಣೆಯಂದು ಯಲಹಂಕ ಕೆರೆಯ ಬಳಿ ಬೃಹತ್ ‘ವಾಕಥಾನ್’ ನಡೆಯಲಿದೆ. ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲು ಸಾವಿರಾರು ಮಹಿಳೆಯರು ಈ ನಡಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹೇಗೆ?
“ನನ್ನ ನಗರ, ನನ್ನ ಜವಾಬ್ದಾರಿ” ಎಂದು ಭಾವಿಸುವ ಪ್ರತಿಯೊಬ್ಬ ನಾಗರಿಕನಿಗೂ ಇಲ್ಲಿ ಮುಕ್ತ ಅವಕಾಶವಿದೆ. ಪಾಲಿಕೆಯು ನೀಡಿರುವ ಗೂಗಲ್ ಫಾರ್ಮ್ ಲಿಂಕ್ ಮೂಲಕ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗಾಗಿ ಶಾಲಾ-ಕಾಲೇಜುಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನೂ ರೂಪಿಸಲಾಗಿದೆ.
ಅಭಿಯಾನದ ಕುರಿತು ಮಾತನಾಡಿದ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಾಲ ಸುನಿಲ್ ಕುಮಾರ್, “ಸ್ವಚ್ಛ ಸರ್ವೇಕ್ಷಣೆ 2025-26ರಲ್ಲಿ ನಮ್ಮ ನಗರವನ್ನು ಅಗ್ರಸ್ಥಾನದಲ್ಲಿ ನಿಲ್ಲಿಸುವುದು ನಮ್ಮ ಗುರಿ. ಆದರೆ ಇದು ಕೇವಲ ಅಂಕಿ-ಅಂಶಗಳಿಗಾಗಿ ಅಲ್ಲ; ಪ್ರತಿಯೊಬ್ಬ ನಾಗರಿಕನಿಗೂ ಶುಚಿಯಾದ ರಸ್ತೆ, ಸುಂದರವಾದ ಕೆರೆ ಮತ್ತು ಆರೋಗ್ಯಕರ ಪರಿಸರ ಸಿಗಬೇಕೆಂಬುದು ನಮ್ಮ ಆಶಯ ಎಂದಿದ್ದಾರೆ.

