Fri. Mar 6th, 2026

ಸೌದಿ ಅರೇಬಿಯಾದಲ್ಲಿ ಕನ್ನಡಿಗರ ರಕ್ಷಣೆಗೆ ಕ್ರಮ:ಕೇಂದ್ರಕ್ಕೆ ಡಿಸಿಎಂ ಒತ್ತಾಯ

Share this with Friends

ಬಾಳೆಹೊನ್ನೂರು: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧವು ಜಾಗತಿಕ ಆತಂಕಕ್ಕೆ ಕಾರಣವಾಗಿದ್ದು, ಯುದ್ಧ ಪೀಡಿತ ಪ್ರದೇಶ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರು ಸೇರಿದಂತೆ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಬಾಳೆಹೊನ್ನೂರಿನಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಏಷ್ಯಾದಲ್ಲಿನ ಸದ್ಯದ ಸ್ಥಿತಿಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಯುದ್ಧದ ಹೆಸರಿನಲ್ಲಿ ಮುಗ್ಧ ಮಕ್ಕಳನ್ನು ಬಲಿ ಪಡೆಯುತ್ತಿರುವುದು ಮತ್ತು ಶಾಲೆಗಳ ಮೇಲೆ ದಾಳಿ ನಡೆಸುತ್ತಿರುವುದು ಅತ್ಯಂತ ಖಂಡನೀಯ. ಯಾವುದೇ ದೇಶಗಳ ನಡುವಿನ ಸಂಘರ್ಷದಲ್ಲಿ ಸಾಮಾನ್ಯ ಜನರಿಗೆ ತೊಂದರೆಯಾಗಬಾರದು,” ಎಂದರು.

ಗಣ್ಯರ ಕುಟುಂಬಗಳು ಸಂಕಷ್ಟದಲ್ಲಿ:

“ದುಬೈ ಮತ್ತು ಸೌದಿ ಅರೇಬಿಯಾದಲ್ಲಿ ಶಾಸಕರಾದ ಎ.ಸಿ. ಶ್ರೀನಿವಾಸ್, ಭರತ್ ರೆಡ್ಡಿ ಅವರ ಕುಟುಂಬದವರು ಹಾಗೂ ಎಂಎಲ್‌ಸಿ ಭೋಜೇಗೌಡ ಅವರು ಸಿಲುಕಿಕೊಂಡಿದ್ದಾರೆ. ದಕ್ಷಿಣ ಭಾರತದ ಸಾವಿರಾರು ಕಾರ್ಮಿಕರು ಮತ್ತು ಉದ್ಯಮಿಗಳು ಅಲ್ಲಿ ನೆಲೆಸಿದ್ದು, ಹಲವರಿಂದ ಕರೆಗಳು ಬರುತ್ತಿವೆ. ಕ್ಷಿಪಣಿ ದಾಳಿಯ ದೃಶ್ಯಗಳಿಂದ ಜನರು ಭಯಭೀತರಾಗಿದ್ದಾರೆ,” ಎಂದು ಮಾಹಿತಿ ನೀಡಿದರು.

ಸಹಾಯವಾಣಿ ಮತ್ತು ರಕ್ಷಣೆ:

ಸಂತ್ರಸ್ತರಿಗೆ ಸಹಾಯವಾಣಿ ತೆರೆಯುವ ಕುರಿತು ಉತ್ತರಿಸಿದ ಅವರು, “ವಿದೇಶಾಂಗ ವ್ಯವಹಾರಗಳು ಕೇಂದ್ರದ ವ್ಯಾಪ್ತಿಗೆ ಬರುವುದರಿಂದ ರಾಜ್ಯ ಸರ್ಕಾರ ಪ್ರತ್ಯೇಕ ಸಹಾಯವಾಣಿ ತೆರೆಯಲು ತಾಂತ್ರಿಕ ಮಿತಿಗಳಿವೆ. ಆದರೆ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಭಾರತೀಯರನ್ನು ರಕ್ಷಿಸುವ ಕೆಲಸವನ್ನು ನಾವು ಮಾಡುತ್ತೇವೆ. ವಿದೇಶದಲ್ಲಿರುವ ಕನ್ನಡ ಸಂಘಟನೆಗಳು ಅಲ್ಲಿನ ಜನರಿಗೆ ಆತ್ಮಸ್ಥೈರ್ಯ ತುಂಬಬೇಕು,” ಎಂದು ಮನವಿ ಮಾಡಿದರು.

ಈ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.

ಮಾನವಧರ್ಮವೇ ಶಾಂತಿಗೆ ದಾರಿ:

 “ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಕೇವಲ ಆ ರಾಷ್ಟ್ರಗಳಿಗೆ ಸೀಮಿತವಲ್ಲ, ಇದರಿಂದ ಭಾರತಕ್ಕೂ ದೊಡ್ಡ ಗಂಡಾಂತರ ಎದುರಾಗಲಿದೆ,”ಹಾಗಾಗಿ ಅಮೆರಿಕ ತಕ್ಷಣ ಮಧ್ಯಪ್ರವೇಶಿಸಿ ಯುದ್ಧ ನಿಲ್ಲಿಸಬೇಕು.”ಪ್ರಪಂಚದಲ್ಲಿ ಶಾಂತಿ ನೆಲೆಸಬೇಕು, ಯಾವುದೇ ಪ್ರಾಣಹಾನಿ ಸಂಭವಿಸಬಾರದು ಎಂಬುದು ನಮ್ಮ ಪ್ರಾರ್ಥನೆ. ‘ಮಾನವಧರ್ಮಕ್ಕೆ ಜಯವಾಗಲಿ, ಮಾನವಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಗಂಗಾಧರ ಅಜ್ಜಯ್ಯ ಅವರ ಆಶಯದಂತೆ ನಾವೆಲ್ಲರೂ ಶಾಂತಿಗಾಗಿ ಮನವಿ ಮಾಡೋಣ” ಎಂದು ಡಿಸಿಎಂ ಕರೆ ನೀಡಿದರು.

ಸೌದಿ ರಾಷ್ಟ್ರದ ಬೆಳವಣಿಗೆಯಲ್ಲಿ ಭಾರತೀಯರ ಪಾತ್ರ:

“ಇಲ್ಲಿ ಕನ್ನಡಿಗರು ಅಥವಾ ಇತರ ರಾಜ್ಯದವರು ಎಂಬ ಭೇದವಿಲ್ಲ, ನಾವೆಲ್ಲರೂ ಭಾರತೀಯರು. ಇಡೀ ಸೌದಿ ಅರೇಬಿಯಾ ದೇಶದ ಆರ್ಥಿಕತೆ ಮತ್ತು ಪ್ರಗತಿಯಲ್ಲಿ ಭಾರತೀಯರ ಶ್ರಮವಿದೆ. ಅದರಲ್ಲೂ ದಕ್ಷಿಣ ಭಾರತದ, ವಿಶೇಷವಾಗಿ ಮಂಗಳೂರು ಮತ್ತು ಕೇರಳ ಭಾಗದ ಪ್ರತಿಯೊಂದು ಕುಟುಂಬದ ಒಬ್ಬರಾದರೂ ಸೌದಿಯಲ್ಲಿ ವೃತ್ತಿಪರರಾಗಿ ಕೆಲಸ ಮಾಡುತ್ತಾ ದೇಶವನ್ನು ಕಟ್ಟುತ್ತಿದ್ದಾರೆ. ಅಂತಹ ಜನ ಇಂದು ಆತಂಕದಲ್ಲಿದ್ದಾರೆ,” ಎಂದು ವಿವರಿಸಿದರು.

ಜಾಗತಿಕ ಸಂಚಾರ ವ್ಯವಸ್ಥೆ ಸ್ಥಗಿತ:

ಯುದ್ಧದ ಭೀಕರತೆಯನ್ನು ವಿವರಿಸುತ್ತಾ, “ಒಂದೇ ಬಾಂಬ್ ದಾಳಿಗೆ 70 ಶಾಲಾ ಮಕ್ಕಳು ಬಲಿಯಾಗಿರುವುದು ಅತ್ಯಂತ ಕ್ರೂರ. ವಿಶ್ವದ ಸಂಚಾರಕ್ಕೆ ಸೌದಿ ಮತ್ತು ಸಿಂಗಾಪುರ ಪ್ರಮುಖ ಮಾರ್ಗಗಳಾಗಿದ್ದವು. ಆದರೆ ಈಗ ಅರ್ಧಕ್ಕೂ ಹೆಚ್ಚು ಪ್ರಪಂಚಕ್ಕೆ ಪ್ರಯಾಣ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ವಿಮಾನಯಾನದ ಮೇಲೆ ಹೇರಲಾಗಿರುವ ನಿರ್ಬಂಧಗಳಿಂದಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೀಡಾಗಿದ್ದಾರೆ,” ಎಂದು ತಿಳಿಸಿದರು.

ನಮ್ಮ ಸರ್ಕಾರವು ವಿದೇಶದಲ್ಲಿರುವ ಕನ್ನಡಿಗರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ಕೇಂದ್ರ ಸರ್ಕಾರದ ಮೂಲಕ ರಕ್ಷಣಾ ಕಾರ್ಯಕ್ಕೆ ಸಕಲ ಪ್ರಯತ್ನ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.


Share this with Friends

Related Post