Fri. Mar 6th, 2026

ಸಚಿವ ಮಧು ಬಂಗಾರಪ್ಪ ಜನ್ಮದಿನದ ಸವಿನೆನಪು: ಪೌರಕಾರ್ಮಿಕರಿಗೆ ವಿಮಾನಯಾನದ ಸೌಭಾಗ್ಯ!

Share this with Friends

ಶಿವಮೊಗ್ಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಈ ಬಾರಿ ತಮ್ಮ ಜನ್ಮದಿನವನ್ನು ಅತ್ಯಂತ ವಿಶಿಷ್ಟ ಹಾಗೂ ಮಾನವೀಯತೆಯಿಂದ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ಸಮಾಜದ ಕಟ್ಟಕಡೆಯ ಶ್ರಮಿಕ ವರ್ಗವಾದ ಪೌರಕಾರ್ಮಿಕರಿಗೆ ವಿಮಾನ ಪ್ರಯಾಣದ ಕನಸನ್ನು ನನಸು ಮಾಡುವ ಮೂಲಕ ಅವರು ಹೊಸ ಮಾದರಿ ಸೃಷ್ಟಿಸಿದ್ದಾರೆ.

ಸೊರಬ ಪುರಸಭೆ ಹಾಗೂ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೌರಕಾರ್ಮಿಕರನ್ನು ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಕರೆದೊಯ್ಯುವ ವಿಶಿಷ್ಟ ಕಾರ್ಯಕ್ರಮಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಪೌರಕಾರ್ಮಿಕರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಸಚಿವರ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

“ಸಾಮಾನ್ಯವಾಗಿ ಸಚಿವರು, ರಾಜಕಾರಣಿಗಳು ಅದ್ದೂರಿ ಕಾರ್ಯಕ್ರಮಗಳ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಆದರೆ ಮಧು ಬಂಗಾರಪ್ಪ ಅವರು ಶ್ರಮಿಕ ವರ್ಗಕ್ಕೆ ವಿಮಾನಯಾನದ ಸೌಭಾಗ್ಯ ಕಲ್ಪಿಸಿರುವುದು ಶ್ಲಾಘನೀಯ,” ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಮಿಕರ ಮೊಗದಲ್ಲಿ ಮಂದಹಾಸ:

ಜೀವನದಲ್ಲಿ ಎಂದೂ ವಿಮಾನ ಹತ್ತುವ ಕನಸು ಕಾಣದಿದ್ದ ಪೌರಕಾರ್ಮಿಕರು, ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರ ಕಣ್ಣಲ್ಲಿ ಅತೀವ ಸಂಭ್ರಮ ಹಾಗೂ ಭಾವಪರವಶತೆ ಕಂಡುಬಂದಿತು. “ನಮ್ಮ ಕಷ್ಟದ ಕೆಲಸವನ್ನು ಗುರುತಿಸಿ, ನಮಗೆ ಇಂತಹ ಗೌರವ ನೀಡಿದ ಸಚಿವರಿಗೆ ನಾವು ಆಭಾರಿ,” ಎಂದು ಪೌರಕಾರ್ಮಿಕರು ಹರ್ಷ ವ್ಯಕ್ತಪಡಿಸಿದರು.

ಸಮಾಜದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುವ ಕೈಗಳಿಗೆ ವಿಮಾನಯಾನದಂತಹ ವಿಭಿನ್ನ ಉಡುಗೊರೆ ನೀಡುವ ಮೂಲಕ ಸಚಿವರು ಈ ಬಾರಿಯ ಜನ್ಮದಿನಕ್ಕೆ ವಿಶೇಷ ಅರ್ಥ ಕಲ್ಪಿಸಿದ್ದಾರೆ.


Share this with Friends

Related Post