ಬೆಂಗಳೂರು/ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ ವಿಮಾನಯಾನದಲ್ಲಿ ವ್ಯತ್ಯಯ ಉಂಟಾಗಿದ್ದು, ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಬಿಗ್ ಬಾಸ್ ಖ್ಯಾತಿಯ ಡ್ರೋಣ್ ಪ್ರತಾಪ್ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿಕೊಂಡಿದ್ದು ಅವರೆಲ್ಲಾ ಸುರಕ್ಷಿತವಾಗಿದ್ದಾರೆ.
ಅಬುಧಾಬಿ ವಿಮಾನ ನಿಲ್ದಾಣದಿಂದಲೇ ವೀಡಿಯೋ ಸಂದೇಶ ರವಾನಿಸಿರುವ ಡ್ರೋಣ್ ಪ್ರತಾಪ್, “ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ಅಬುಧಾಬಿಯಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನ ಸೇರಿದಂತೆ ಮುಂದಿನ 12 ಗಂಟೆಗಳ ಕಾಲ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ, ಯಾರೂ ಆತಂಕಪಡಬೇಡಿ” ಎಂದು ಮನವಿ ಮಾಡಿದ್ದಾರೆ.
ಸಹಾಯಕ್ಕೆ ಧಾವಿಸಿದ ಕನ್ನಡಿಗರು:
ನಿಲ್ದಾಣದಲ್ಲಿ ಆಹಾರ ಮತ್ತು ನೀರಿನ ಸಮಸ್ಯೆಯಾಗದಂತೆ ಅಲ್ಲಿನ ಸ್ಥಳೀಯ ಕನ್ನಡಿಗರು ಮತ್ತು ಸಂಘಟನೆಗಳು ನೆರವಿಗೆ ಧಾವಿಸಿವೆ ಎಂದು ಪ್ರತಾಪ್ ಮಾಹಿತಿ ನೀಡಿದ್ದಾರೆ. ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಕೂಡ ಪ್ರಯಾಣಿಕರ ಸಂಪರ್ಕದಲ್ಲಿದ್ದು, ಪರಿಸ್ಥಿತಿ ತಿಳಿಯಾದ ಕೂಡಲೇ ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
ಸರ್ಕಾರದ ತುರ್ತು ಕ್ರಮ:
ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ವಿದೇಶಾಂಗ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ” ಎಂದು ತಿಳಿಸಿದ್ದಾರೆ. ನೆರವಿಗಾಗಿ ಜಿಲ್ಲಾಡಳಿತಗಳು ಈಗಾಗಲೇ ಸಹಾಯವಾಣಿಯನ್ನು ತೆರೆದಿವೆ.

