Fri. Mar 6th, 2026

ಗ್ಯಾರಂಟಿ ಯೋಜನೆಗಳ ‘ಶ್ರೀಮಂತ’ ಫಲಾನುಭವಿಗಳಿಗೆ ಕತ್ತರಿ ಬೀಳಲಿ: ಶಾಸಕ ಬಾಲಕೃಷ್ಣ ಆಗ್ರಹ

Share this with Friends

ಬೆಂಗಳೂರು: ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳನ್ನು ಕೇವಲ ಅರ್ಹ ಬಡವರಿಗೆ ಮಾತ್ರ ಸೀಮಿತಗೊಳಿಸಿ, ಆರ್ಥಿಕವಾಗಿ ಸದೃಢರಾಗಿರುವವರನ್ನು ಈ ಸೌಲಭ್ಯದಿಂದ ಹೊರಗಿಡಲು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಇಂದು ಸರ್ಕಾರಕ್ಕೆ ಪ್ರಬಲವಾಗಿ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಗ್ಯಾರಂಟಿ ಯೋಜನೆಗಳ ದಕ್ಷ ನಿರ್ವಹಣೆಯ ಕುರಿತು ಮಹತ್ವದ ಸಲಹೆಗಳನ್ನು ನೀಡಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳನ್ನು ಕೇವಲ ಅರ್ಹ ಬಡವರಿಗೆ ಮಾತ್ರ ಸೀಮಿತಗೊಳಿಸಿ, ಶ್ರೀಮಂತ ವರ್ಗದವರನ್ನು ಈ ವ್ಯಾಪ್ತಿಯಿಂದ ಹೊರಗಿಡಬೇಕು.

ಗ್ಯಾರಂಟಿ ಯೋಜನೆಗಳು ಸಮಾಜದ ಕೆಳಹಂತದ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿವೆ ಎಂಬುದು ನಿಜ. ಆದರೆ, ಆರ್ಥಿಕವಾಗಿ ಸದೃಢರಾಗಿರುವವರು ಮತ್ತು ಆದಾಯ ತೆರಿಗೆ ಪಾವತಿಸುವವರಿಗೂ ಇವುಗಳ ಲಾಭ ಸಿಗುತ್ತಿರುವುದು ಸರಿಯಲ್ಲ. ಎಪಿಎಲ್ ಕಾರ್ಡ್ ಹೊಂದಿರುವ ಶ್ರೀಮಂತ ವರ್ಗದ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಕಡಿತಗೊಳಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.

“ಬಸ್ಸಿನಲ್ಲಿ ಶ್ರೀಮಂತರು ಉಚಿತವಾಗಿ ಪ್ರಯಾಣಿಸುವುದರಿಂದ ಯಾರಿಗೂ ಲಾಭವಿಲ್ಲ. ಅದೇ ಹಣ ಬಡವರ ಕಲ್ಯಾಣಕ್ಕೆ ಬಳಕೆಯಾದರೆ ಯೋಜನೆಯ ಉದ್ದೇಶ ಸಾರ್ಥಕವಾಗುತ್ತದೆ” ಎಂದು ಉದಾಹರಣೆ ನೀಡಿದ ಅವರು,ಯೋಜನೆಗಳ ಪರಿಷ್ಕರಣೆಯಿಂದ ಉಳಿತಾಯವಾಗುವ ಹಣವನ್ನು ರಾಜ್ಯದ ನೀರಾವರಿ ಯೋಜನೆಗಳು, ರಸ್ತೆ ಅಭಿವೃದ್ಧಿ ಹಾಗೂ ಶಿಕ್ಷಣದಂತಹ ಮೂಲಸೌಕರ್ಯಗಳಿಗೆ ವಿನಿಯೋಗಿಸಬಹುದು. ರಾಜ್ಯದ ಒಟ್ಟಾರೆ ಪ್ರಗತಿಯ ದೃಷ್ಟಿಯಿಂದ ಹಣದ ಸದ್ಬಳಕೆ ಅತ್ಯಂತ ಮುಖ್ಯವಾಗಿದೆ. ಕೇವಲ ಬಡವರು ಮತ್ತು ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಈ ಸೌಲಭ್ಯಗಳು ತಲುಪುವಂತೆ ಹೊಸ ಮಾನದಂಡಗಳನ್ನು ರೂಪಿಸಬೇಕು ಎಂದು ಶಾಸಕರು ಸರ್ಕಾರಕ್ಕೆ ಒತ್ತಾಯಿಸಿದರು.

ಇದೇ ವೇಳೆ ಮುಖ್ಯಮಂತ್ರಿಗಳ ನಡೆಯ ಕುರಿತು ಮಾತನಾಡಿದ ಅವರು, ರಾಜ್ಯ ಬಜೆಟ್ ಮಂಡನೆಯಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ಖಂಡಿತವಾಗಿಯೂ ಗಮನಹರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಅರ್ಹರ ಪುನರ್ ವಿಂಗಡಣೆ ಮಾಡುವ ಮೂಲಕ ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸಬಹುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಮುಂದಿನ ಚುನಾವಣೆ ದೃಷ್ಟಿ: ಈಗಲೇ ಎಚ್ಚೆತ್ತುಕೊಂಡು ಯೋಜನೆಗಳನ್ನು ಸರಿಪಡಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದರು.ಈ ಹಿಂದೆ ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಗ್ಯಾರಂಟಿ ಕುರಿತು ಮಾತನಾಡಿದ್ದ ಅವರು, ಈಗ ಪಕ್ಷ ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸಲು ಅರ್ಹರಿಗೆ ಮಾತ್ರ ಸೌಲಭ್ಯ ಸಿಗುವುದು ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.

ಹೈಕಮಾಂಡ್ ಹಸ್ತಕ್ಷೇಪಕ್ಕೆ ಮನವಿ: ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಪಕ್ಷದೊಳಗಿನ ಗೊಂದಲಗಳ ಕುರಿತು ಪ್ರಸ್ತಾಪಿಸಿದ ಅವರು, ಈ ಬಗ್ಗೆ ಹೈಕಮಾಂಡ್ ತಕ್ಷಣ ಮಧ್ಯಪ್ರವೇಶಿಸಿ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಮನವಿ ಮಾಡಿದರು.

 


Share this with Friends

Related Post