ಬೆಂಗಳೂರು: ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಮರುಚಿಂತನೆ ನಡೆಯಬೇಕೆಂದು ಒತ್ತಾಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ನಿಟ್ಟಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಕೇಂದ್ರದ ಇತ್ತೀಚಿನ ಧೋರಣೆಗಳಿಂದಾಗಿ ಒಕ್ಕೂಟ ವ್ಯವಸ್ಥೆಯು ‘ಸಹಕಾರ’ದ ಬದಲು ‘ಬಲವಂತದ ಫೆಡರಲಿಸಂ’ ಆಗಿ ಮಾರ್ಪಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಸರ್ಕಾರವು ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಸಿದ್ಧಪಡಿಸಿರುವ ಉನ್ನತ ಮಟ್ಟದ ಸಮಿತಿ ವರದಿಯ ಮೊದಲ ಭಾಗವನ್ನು ಶ್ಲಾಘಿಸಿರುವ ಸಿದ್ದರಾಮಯ್ಯ, ಭಾರತವು ‘ರಾಜ್ಯಗಳ ಒಕ್ಕೂಟ’ವೇ ಹೊರತು ಮರೆಮಾಚಿದ ಏಕ ಕೇಂದ್ರಿತ ರಾಜ್ಯವಲ್ಲ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ಸ್ಮರಿಸಿದ್ದಾರೆ. ಸಂವಿಧಾನದಲ್ಲಿ ಫೆಡರಲಿಸಂ ಎಂಬುದು ಕೇವಲ ಆಡಳಿತಾತ್ಮಕ ಅನುಕೂಲಕ್ಕಾಗಿ ಇರುವುದಲ್ಲ, ಅದು ಅಧಿಕಾರ ಕೇಂದ್ರೀಕರಣದ ವಿರುದ್ಧದ ಸಾಂವಿಧಾನಿಕ ಗ್ಯಾರಂಟಿಯಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಣಕಾಸು ಮತ್ತು ಶಾಸನಬದ್ಧ ಅತಿಕ್ರಮಣ:
ಕಳೆದ ದಶಕಗಳಲ್ಲಿ ಕೇಂದ್ರ ಸರ್ಕಾರವು ಸಮವರ್ತಿ ಪಟ್ಟಿಯ ಅತಿರೇಕದ ವ್ಯಾಖ್ಯಾನ, ಕಠಿಣ ಷರತ್ತುಗಳ ಹಣಕಾಸು ವರ್ಗಾವಣೆ ಮತ್ತು ರಾಜ್ಯಗಳ ನಮ್ಯತೆಯನ್ನು ಕುಗ್ಗಿಸುವ ಕೇಂದ್ರೀಯ ಯೋಜನೆಗಳ ಮೂಲಕ ಒಕ್ಕೂಟ ವ್ಯವಸ್ಥೆಯ ಸಮತೋಲನವನ್ನು ಹದಗೆಡಿಸಿದೆ. ಜಿಎಸ್‌ಟಿ ಮತ್ತು ಹಣಕಾಸು ಆಯೋಗದ ಕಾರ್ಯವೈಖರಿಯು ರಾಜ್ಯಗಳ ಹಣಕಾಸಿನ ಸಾರ್ವಭೌಮತ್ವವನ್ನು ದುರ್ಬಲಗೊಳಿಸಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.
ರಾಜ್ಯಗಳ ಹಕ್ಕುಗಳಿಗೆ ಚ್ಯುತಿ:
ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರ ಒಪ್ಪಿಗೆ ಪಡೆಯುವಲ್ಲಿ ಆಗುತ್ತಿರುವ ವಿಳಂಬ ಮತ್ತು ಅಡೆತಡೆಗಳ ಬಗ್ಗೆಯೂ ಸಿದ್ದರಾಮಯ್ಯ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಜವಾಬ್ದಾರಿಗೆ ತಕ್ಕಂತೆ ಅಧಿಕಾರ ಮತ್ತು ಸಂಪನ್ಮೂಲಗಳನ್ನು ಹಂಚಿಕೆ ಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಸಮಾನ ಮನಸ್ಕ ರಾಜ್ಯಗಳು ಒಗ್ಗೂಡಬೇಕಾದ ಅಗತ್ಯವಿದೆ ಎಂದು ಅವರು ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರವು ಸಮವರ್ತಿ ಪಟ್ಟಿಯ ಅತಿರೇಕದ ಬಳಕೆ, ಜಿಎಸ್‌ಟಿ ವ್ಯವಸ್ಥೆ ಮತ್ತು ರಾಜ್ಯಪಾಲರ ವಿವೇಚನಾಧಿಕಾರದ ಮೂಲಕ ರಾಜ್ಯಗಳ ಸ್ವಾಯತ್ತತೆಯನ್ನು ಕುಗ್ಗಿಸುತ್ತಿದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. “ಸಹಕಾರಿ ಫೆಡರಲಿಸಂ ಈಗ ಬಲವಂತದ ಫೆಡರಲಿಸಂ ಆಗಿ ಬದಲಾಗುತ್ತಿದೆ. ಅಧಿಕಾರ ಮತ್ತು ಸಂಪನ್ಮೂಲಗಳು ಕೇಂದ್ರದಲ್ಲಿ ಅತಿಯಾಗಿ ಕೇಂದ್ರೀಕೃತವಾಗುತ್ತಿರುವುದು ರಾಜ್ಯಗಳ ಅಭಿವೃದ್ಧಿಗೆ ಮಾರಕ” ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ. ಭಾಷಾ ನೀತಿ, ಶಿಕ್ಷಣ ಮತ್ತು ಹಣಕಾಸು ಹಂಚಿಕೆಯಲ್ಲಿ ರಾಜ್ಯಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಪ್ರಾದೇಶಿಕ ಬೇಡಿಕೆಯಲ್ಲ, ಅದು ಸಾಂವಿಧಾನಿಕ ಹಕ್ಕು ಎಂದು ಅವರು ಪ್ರತಿಪಾದಿಸಿದ್ದಾರೆ.

