ಮಾಗಡಿ: “ನಮ್ಮ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಕೇವಲ ಬಜೆಟ್ ಘೋಷಣೆಗಳ ಮೇಲೆ ಅವಲಂಬಿತವಾಗಿಲ್ಲ. ಬೇರೆಯವರಿಗೆ ಬಜೆಟ್ ಆಧಾರ ಬೇಕಿರಬಹುದು, ಆದರೆ ನನ್ನ ಬಳಿ ಅಧಿಕಾರದ ಪೆನ್ನು-ಪೇಪರ್ ಇದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಲ್ಲಿ ಗುಡುಗಿದ್ದಾರೆ.
ಬುಧವಾರ ಮಾಗಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ನಿರೀಕ್ಷೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದರು. “ಬಜೆಟ್‌ನಲ್ಲಿ ಅಧಿಕೃತವಾಗಿ ಸೇರ್ಪಡೆಯಾಗದಿದ್ದರೂ ನಾವು ಜಿಲ್ಲೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಉದಾಹರಣೆಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯೊಂದರಲ್ಲೇ ತಲಾ 15 ಕೋಟಿ ರೂ. ವೆಚ್ಚದ 25 ಕೆಪಿಎಸ್ ಶಾಲೆಗಳನ್ನು ನಿರ್ಮಿಸುತ್ತಿದ್ದೇವೆ. ಇದು ಬಜೆಟ್ ಪ್ರಸ್ತಾವನೆಗಿಂತಲೂ ಮಿಗಿಲಾದ ನಮ್ಮ ಕನಸಿನ ಯೋಜನೆ. ರಾಜ್ಯಾದ್ಯಂತ ಇಂತಹ 2,000 ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ,” ಎಂದರು.
ವೈದ್ಯಕೀಯ ಕಾಲೇಜು ವಿವಾದಕ್ಕೆ ಟಾಂಗ್:
ಹಿಂದಿನ ಸರ್ಕಾರಗಳ ರಾಜಕೀಯವನ್ನು ಸ್ಮರಿಸಿದ ಅವರು, “ಕುಮಾರಸ್ವಾಮಿ ಅವರ ಅವಧಿಯಲ್ಲಿ ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಅವರು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಿದ್ದರು. ಆದರೆ ಈಗ ನಾವು ರಾಮನಗರ ಮತ್ತು ಕನಕಪುರ ಎರಡೂ ಕಡೆ ಮೆಡಿಕಲ್ ಕಾಲೇಜು ನೀಡಿದ್ದೇವೆ. ಚನ್ನಪಟ್ಟಣಕ್ಕೂ ಖಾಸಗಿ ಕಾಲೇಜು ಬಂದಿದೆ. ಮಾಗಡಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ನಮಗೆ ಸ್ಪಷ್ಟ ಅರಿವಿದೆ,” ಎಂದು ವಿವರಿಸಿದರು.
ಹೇಮಾವತಿ ಲಿಂಕ್ ಕೆನಾಲ್ ನಿಲ್ಲದು:
ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕುರಿತು ಮಾತನಾಡಿದ ಡಿಸಿಎಂ, “ಈ ಯೋಜನೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಣ್ಣಪುಟ್ಟ ವಿರೋಧಗಳ ನಡುವೆಯೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಮುಂದುವರಿಯಲಿದೆ. ಸತ್ತೇಗಾಲದಿಂದ ನೀರು ತರುವ ಕಾಲುವೆ ಕಾಮಗಾರಿಯನ್ನು ನಾನೇ ಖುದ್ದಾಗಿ ಪರಿಶೀಲಿಸಿದ್ದೇನೆ, ಶೀಘ್ರದಲ್ಲೇ ಅದು ಪೂರ್ಣಗೊಳ್ಳಲಿದೆ,” ಎಂದು ಭರವಸೆ ನೀಡಿದರು. ಇದೇ ವೇಳೆ ವಿದೇಶ ಪ್ರವಾಸ ಮುಗಿಸಿ ಬಂದಿರುವ ಶಾಸಕರು ತಮ್ಮನ್ನು ಭೇಟಿ ಮಾಡಿ ಪ್ರವಾಸದ ಅನುಭವ ಹಂಚಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

