ಬೆಂಗಳೂರು: ರಾಜ್ಯದ ಗುತ್ತಿಗೆದಾರರ ಸುದೀರ್ಘ ಕಾಲದ ಬೇಡಿಕೆಯಾದ ಬಾಕಿ ಬಿಲ್ ಬಿಡುಗಡೆ ಕುರಿತು ಮುಖ್ಯಮಂತ್ರಿಗಳ ಜೊತೆ ವಿಶೇಷ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಸದಸ್ಯರನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, “ನಾನು ಮತ್ತು ಸಚಿವ ಸತೀಶ್ ಜಾರಕಿಹೊಳಿ ಅವರು ಈ ಅಧಿವೇಶನದ ಅವಧಿಯಲ್ಲೇ ಮುಖ್ಯಮಂತ್ರಿಗಳೊಂದಿಗೆ ನಿಮ್ಮ ಸಭೆ ಏರ್ಪಡಿಸುತ್ತೇವೆ. ಗುತ್ತಿಗೆದಾರರ ಹಿತರಕ್ಷಣೆ ನಮ್ಮ ಜವಾಬ್ದಾರಿ” ಎಂದರು.
₹37 ಸಾವಿರ ಕೋಟಿ ಬಾಕಿ:
“ನನ್ನ ಇಲಾಖೆಯಲ್ಲಿ 13 ಸಾವಿರ ಕೋಟಿ ರೂ. ಹಾಗೂ ಸಚಿವ ಬೋಸರಾಜು ಅವರ ಇಲಾಖೆಯಲ್ಲಿ 3 ಸಾವಿರ ಕೋಟಿ ರೂ. ಸೇರಿದಂತೆ ರಾಜ್ಯಾದ್ಯಂತ ಸುಮಾರು 37 ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನದ ಲಭ್ಯತೆ ಇಲ್ಲದಿದ್ದರೂ ಕಾಮಗಾರಿಗಳಿಗೆ ಆದೇಶ ನೀಡಿದ್ದೇ ಈ ಇಕ್ಕಟ್ಟಿಗೆ ಕಾರಣ. ನಾನು ಈ ಮೊದಲೇ ಎಚ್ಚರಿಕೆ ನೀಡಿದ್ದರೂ ಗುತ್ತಿಗೆದಾರರು ಕೆಲಸ ಮುಂದುವರಿಸಿದ್ದರು. ಪ್ರಸ್ತುತ ಈ ಸಮಸ್ಯೆಗೆ 50 ಸಾವಿರ ಕೋಟಿ ರೂ.ಗಳ ಬಾಂಡ್ ಅಥವಾ ಪರ್ಯಾಯ ಆರ್ಥಿಕ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ” ಎಂದು ಅವರು ವಿವರಿಸಿದರು.
ಗ್ಯಾರಂಟಿ ನಡುವೆಯೂ ಸಮತೋಲಿತ ಬಜೆಟ್:
ಬೆಲೆ ಏರಿಕೆಯ ಬಿಸಿಯಿಂದ ಜನರನ್ನು ರಕ್ಷಿಸಲು ಸರ್ಕಾರ ವಾರ್ಷಿಕ 52 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಹೊರೆಯ ನಡುವೆಯೂ ರಾಜ್ಯದ ಆರ್ಥಿಕತೆಯನ್ನು ಸಮತೋಲನದಲ್ಲಿಟ್ಟು, ಮುಖ್ಯಮಂತ್ರಿಗಳು ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡರು.
ಕೇಂದ್ರದ ವಿರುದ್ಧ ವಾಗ್ದಾಳಿ:
ಬಜೆಟ್ ವಿಚಾರದಲ್ಲಿ ವಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, “ಬಿಜೆಪಿಯವರು ಚೊಂಬು ಹಿಡಿದು ಪ್ರತಿಭಟಿಸುತ್ತಿದ್ದಾರೆ, ಆದರೆ ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ನೀಡಿದ್ದು ಬರಿ ಖಾಲಿ ಬಿಂದಿಗೆ” ಎಂದು ವ್ಯಂಗ್ಯವಾಡಿದರು. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5,300 ಕೋಟಿ ರೂ. ಅನುದಾನ ಇಂದಿಗೂ ಬಿಡುಗಡೆಯಾಗಿಲ್ಲ. ಬೆಂಗಳೂರು ಅಭಿವೃದ್ಧಿಗೂ ಕೇಂದ್ರದಿಂದ ಆರ್ಥಿಕ ನೆರವು ಸಿಕ್ಕಿಲ್ಲ ಎಂದು ಕಿಡಿಕಾರಿದರು.
ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಬೇಡ:
ಗುತ್ತಿಗೆದಾರರಿಗೆ ಕಿವಿಮಾತು ಹೇಳಿದ ಡಿಸಿಎಂ, “ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದರಿಂದ ಕೇವಲ ಸುದ್ದಿಯಾಗುತ್ತದೆಯೇ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ. ಗುತ್ತಿಗೆದಾರರು ಮತ್ತು ಸರ್ಕಾರ ಒಂದೇ ಕುಟುಂಬದಂತೆ ಕೆಲಸ ಮಾಡಬೇಕು. ಮಾಧ್ಯಮಗಳಿಗೆ ಹೇಳಿಕೆ ನೀಡುವುದನ್ನು ಬಿಟ್ಟು, ನಮ್ಮೊಂದಿಗೆ ನೇರ ಚರ್ಚೆಗೆ ಬನ್ನಿ” ಎಂದು ಸಲಹೆ ನೀಡಿದರು.
ಸಮಸ್ಯೆ ಬಗೆಹರಿಸುವ ಭರವಸೆ:
ಹಣಕಾಸಿನ ಇಕ್ಕಟ್ಟಿನ ನಡುವೆಯೂ ಗುತ್ತಿಗೆದಾರರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಬೋಸರಾಜು ಅವರೊಂದಿಗೆ ಸೇರಿ ಹಣ ಹೊಂದಿಸುವ ಮಾರ್ಗಗಳ ಬಗ್ಗೆ ಚರ್ಚಿಸಿ, ಗುತ್ತಿಗೆದಾರರ ಹಿತ ಕಾಯಲಾಗುವುದು ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.
ವಿಧಾನ ಪರಿಷತ್ತಿನಲ್ಲಿ ಪ್ರಾತಿನಿಧ್ಯದ ಆಶಯ:
ಇದೇ ವೇಳೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಹೋರಾಟವನ್ನು ಶ್ಲಾಘಿಸಿದ ಡಿಸಿಎಂ, “ವಿವಿಧ ಕ್ಷೇತ್ರಗಳಿಗೆ ವಿಧಾನ ಪರಿಷತ್ತಿನಲ್ಲಿ ಸ್ಥಾನ ನೀಡುವಂತೆ, ಗುತ್ತಿಗೆದಾರರ ಪರವಾಗಿ ಧ್ವನಿ ಎತ್ತಲು ಅವರಿಗೂ ಸದನದಲ್ಲಿ ಪ್ರಾತಿನಿಧ್ಯ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಒಂದು ದಾರಿ ಹುಡುಕುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

