Fri. Mar 6th, 2026

ಅರಣ್ಯದ ಒಂದಿಂಚು ಭೂಮಿಯೂ ಒತ್ತುವರಿಯಾಗದಂತೆ ರಕ್ಷಿಸಿ: ಸಚಿವ ಈಶ್ವರ ಖಂಡ್ರೆ

Share this with Friends

ಬೆಂಗಳೂರು: “ಮಾನವಕುಲದ ಉಳಿವಿಗೆ ಅರಣ್ಯ ಸಂರಕ್ಷಣೆ ಅನಿವಾರ್ಯವಾಗಿದ್ದು, ಅರಣ್ಯದ ಒಂದಿಂಚು ಜಾಗವೂ ಒತ್ತುವರಿಯಾಗದಂತೆ ನೋಡಿಕೊಳ್ಳುವುದು ಹೊಸದಾಗಿ ನೇಮಕಗೊಂಡ ಸಿಬ್ಬಂದಿಯ ಆದ್ಯ ಕರ್ತವ್ಯವಾಗಿದೆ” ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಗೆ ಹೊಸದಾಗಿ ಆಯ್ಕೆಯಾದ 540 ಗಸ್ತು ಅರಣ್ಯ ಪಾಲಕರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು,ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯ ಇಂದು ಜಗತ್ತಿನ ಮುಂದಿರುವ ಬಹುದೊಡ್ಡ ಸವಾಲುಗಳಾಗಿವೆ. ಅಕಾಲಿಕ ಮಳೆ ಹಾಗೂ ಹೆಚ್ಚುತ್ತಿರುವ ಉಷ್ಣತೆಯಿಂದ ನೈಸರ್ಗಿಕ ಸಮತೋಲನ ಏರುಪೇರಾಗುತ್ತಿದೆ. ಭೂಮಿಯ ಮೇಲಿನ ಪ್ರತಿ ಜೀವಿಯೂ ಬದುಕುವ ಹಕ್ಕನ್ನು ಹೊಂದಿದ್ದು, ವನ್ಯಜೀವಿಗಳ ರಕ್ಷಣೆ ಹಾಗೂ ಅವುಗಳೊಂದಿಗೆ ಸಹಬಾಳ್ವೆ ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಚಿವರು ಪ್ರತಿಪಾದಿಸಿದರು.

ಕರ್ತವ್ಯ ನಿಷ್ಠೆಗೆ ಆದ್ಯತೆ:

“ಕರ್ನಾಟಕವು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಈ ಗೌರವವನ್ನು ಉಳಿಸಿಕೊಳ್ಳಲು ಹೊಸ ಸಿಬ್ಬಂದಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಅರಣ್ಯ ಒತ್ತುವರಿ ಹಾಗೂ ಕಳ್ಳಬೇಟೆಯಂತಹ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು” ಎಂದು ಅವರು ಸೂಚನೆ ನೀಡಿದರು.

ಪ್ರಾಕೃತಿಕ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸಿ, ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಸಂಕಲ್ಪ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post