ಬೆಂಗಳೂರು, ಮಾ.5: ಪಾಕ್ ಪರ ಘೋಷಣೆ ,ರಾಮೇಶ್ವರ ಕಫೆ ಸ್ಫೋಟದ ವಿರುದ್ಧ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ಸದಸ್ಯರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಿದ ಸಮಿತಿಯವರು ಇಸ್ಲಾಮಿಕ್ ಭಯೋತ್ಪಾದನೆ ಬೆಂಗಳೂರಿನಲ್ಲಿ ಮತ್ತೆ ಚಿಗುರೊಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಐಎಸ್ ಸಿ ಮೇಲಿನ ಧಾಳಿ, ಸರಣಿ ಬಾಂಬ್ ಸ್ಫೋಟ, ಚಿನ್ನ ಸ್ವಾಮಿ ಸ್ಟೇಡಿಯಂ ಸ್ಫೋಟ, ಮಂಗಳೂರು ಕುಕ್ಕರ್ ಬ್ಲಾಸ್ಟ್ ಕರಾಳಕೃತ್ಯಗಳು ನಿನ್ನೆಯ ಕಹಿ ನೆನಪುಗಳು ಎಂದು ಹೇಳಿದರು.
ಮೋದಿ ಆಳ್ವಿಕೆಯಲ್ಲಿ ಬಗ್ಗುಬಡಿಯಲಾಗಿದ್ದ ಭಯೋತ್ಪಾದನೆ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮತ್ತೆ ಮೇಲೇಳುತ್ತಿದೆ ಎಂದು ಘೋಷಣೆ ಕೂಗಿದರು.
ಮೊನ್ನೆ ಮೊನ್ನೆ ಪಾಕ್ ಪರ ಘೋಷಣೆಯನ್ನು ಸಂಪುಟದ ಸಚಿವರುಗಳೇ ಸಮರ್ಥಿಸಿಕೊಂಡರು, ತನಿಖೆಯ ಜಾಡನ್ನೇ ಹಾದಿತಪ್ಪಿಸಿ ಮಹಾಪರಾಧಿಗಳನ್ನು ರಕ್ಷಿಸುವ ನೀಚ ಕೃತ್ಯವನ್ನು ಎಸಗಿದರು ಎಂದು ಆರೋಪಿಸಿದರು.
ದೇಶದ್ರೋಹಿ ಮತಾಂಧ ಮುಸ್ಲಿಂ ಮೂಲ ಭೂತವಾದಿಗಳಿಗೆ ಕಾಂಗ್ರೆಸ್ ಸರ್ಕಾರವೇ ಆಶ್ರಯವನ್ನು ನೀಡಿ ಅಶಾಂತಿಯ ಹುಟ್ಟಿಗೆ ಬೆಂಬಲ ನೀಡುತ್ತಿದೆ ಎಂಬುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ ಎಂದು ಕಿಡಿಕಾರಿದರು.
ಕೂಡಲೇ ತಪ್ಪಿತಸ್ಥರನ್ನೆಲ್ಲಾ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.