ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ಆಡಳಿತದಲ್ಲಿ ವಿಫಲವಾಗಿದ್ದು, ರಾಜ್ಯವನ್ನು ದಿವಾಳಿತನದತ್ತ ತಳ್ಳುತ್ತಿದೆ ಎಂದು ಆರೋಪಿಸಿ ಜನತಾದಳ (ಜಾತ್ಯತೀತ) ಪಕ್ಷವು ಇಂದು ಜೆ.ಪಿ. ಭವನದಲ್ಲಿ ಸರ್ಕಾರದ ವಿರುದ್ಧ “ಆರ್ಥಿಕ ಚಾರ್ಜ್‌ಶೀಟ್” ಬಿಡುಗಡೆ ಮಾಡಿತು.
ಪಕ್ಷದ ಶಾಸಕಾಂಗ ನಾಯಕ ಸಿ.ಬಿ. ಸುರೇಶ್ ಬಾಬು ಹಾಗೂ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಜಂಟಿ ನೇತೃತ್ವದಲ್ಲಿ ಈ ವರದಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ವರದಿ ಬಿಡುಗಡೆ ಮಾಡಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, “ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳನ್ನು ಕೈಬಿಟ್ಟು ಕೇವಲ ಲೂಟಿಯಲ್ಲಿ ತೊಡಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುತ್ತಿದ್ದು, ರಾಜ್ಯದ ಆರ್ಥಿಕ ಶಿಸ್ತು ಸಂಪೂರ್ಣವಾಗಿ ಹಳಿ ತಪ್ಪಿದೆ. ತೆರಿಗೆ ಹಣವು ಜನಪರ ಕೆಲಸಗಳಿಗೆ ಬಳಕೆಯಾಗುವ ಬದಲಿಗೆ ದುರುಪಯೋಗವಾಗುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್ಥಿಕ ದಿವಾಳಿತನ: ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿಸಲು ಪರದಾಡುತ್ತಿದ್ದು, ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡದೆ ಕರ್ನಾಟಕವನ್ನು ಆರ್ಥಿಕವಾಗಿ ದಿವಾಳಿ ಮಾಡುತ್ತಿದೆ ಎಂದು ಆರೋಪಿಸಿದರು.
ಪರೋಕ್ಷ ತೆರಿಗೆ ಏರಿಕೆ: ಸರ್ಕಾರವು ಒಂದು ಕೈಯಿಂದ ಜನರಿಗೆ ಹಣ ನೀಡಿ, ಮತ್ತೊಂದು ಕೈಯಿಂದ ಪರೋಕ್ಷವಾಗಿ ಬೆಲೆ ಏರಿಕೆ ಮಾಡುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಮದ್ಯದ ಬೆಲೆ ಏರಿಕೆ, ಮುದ್ರಾಂಕ ಶುಲ್ಕ ಮತ್ತು ಭೂ ನೋಂದಣಿ ದರಗಳ ಹೆಚ್ಚಳವೇ ಇದಕ್ಕೆ ಸಾಕ್ಷಿ ಎಂದರು.
ಭ್ರಷ್ಟಾಚಾರದ ಆರೋಪ: ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ‘40% ಕಮಿಷನ್’ ಆರೋಪ ಮಾಡಿದ್ದ ಕಾಂಗ್ರೆಸ್, ಈಗ ತನ್ನ ಆಡಳಿತದಲ್ಲಿ ಕಮಿಷನ್ ದರವನ್ನು ‘60%’ಕ್ಕೆ ಏರಿಸಿದೆ ಎಂದು ಟೀಕಿಸಿದರು.
ಮೂಲಸೌಕರ್ಯ ನಿರ್ಲಕ್ಷ್ಯ: ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತು ಹದಗೆಟ್ಟ ಮೂಲಸೌಕರ್ಯಗಳ ಬಗ್ಗೆ ಮಾತನಾಡಿದ ಅವರು, ಕೇವಲ ರಾಜಕೀಯ ಪೈಪೋಟಿಯಲ್ಲಿ ತೊಡಗಿರುವ ಸರ್ಕಾರವು ಆಡಳಿತವನ್ನು ಸಂಪೂರ್ಣವಾಗಿ ಮರೆತಿದೆ ಎಂದು ವಾಗ್ದಾಳಿ ನಡೆಸಿದರು.
ರೈತರ ಸಮಸ್ಯೆ: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಕಷ್ಟಕ್ಕೀಡಾದ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೂ ಕೇವಲ ಘೋಷಣೆಗಳನ್ನಷ್ಟೇ ಸೀಮಿತಗೊಳಿಸಿದೆ ಎಂದು ಕಿಡಿಕಾರಿದರು.
ಆಡಳಿತದಲ್ಲಿ ಹಸ್ತಕ್ಷೇಪ: ಕಾಂಗ್ರೆಸ್‌ನ ಆಂತರಿಕ ಕಚ್ಚಾಟದಿಂದಾಗಿ ರಾಜ್ಯದ ಆಡಳಿತ ಯಂತ್ರ ಕುಸಿದಿದೆ. ವರ್ಗಾವಣೆ ದಂಧೆ ಮತ್ತು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕಾಂಗ ನಾಯಕ ಎಸ್.ಎಲ್. ಭೋಜೇಗೌಡ, ಶಾಸಕರಾದ ಶಾರದಾ ಪೂರ್ಯ ನಾಯಕ್, ಜಿ.ಡಿ. ಹರೀಶ್ ಗೌಡ, ಎ. ಮಂಜು, ಹೆಚ್.ಟಿ. ಮಂಜು, ಸಿ.ಎನ್. ಬಾಲಕೃಷ್ಣ, ಕರೆಮ್ಮ ಜಿ. ನಾಯಕ್, ರಾಜುಗೌಡ ಪಾಟೀಲ್ ಹಾಗೂ ಟಿ.ಎ. ಶರವಣ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದು ಸರ್ಕಾರದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತಿದರು.
ಈ ಚಾರ್ಜ್‌ಶೀಟ್ ಮೂಲಕ ಜೆಡಿಎಸ್ ಮುಂಬರುವ ದಿನಗಳಲ್ಲಿ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ರಾಜ್ಯಾದ್ಯಂತ ಹೋರಾಟ ರೂಪಿಸುವ ಮುನ್ಸೂಚನೆ ನೀಡಿದೆ

