Sat. Mar 7th, 2026

ರಸ್ತೆ ಸುರಕ್ಷತೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ: ಸಚಿವ ರಾಮಲಿಂಗಾರೆಡ್ಡಿ ಕರೆ

Share this with Friends

ಬೆಂಗಳೂರು: “ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕೇವಲ ನಿಯಮಗಳು ಸಾಕಾಗುವುದಿಲ್ಲ, ಸಾರ್ವಜನಿಕರಲ್ಲಿ ಸ್ವಯಂ ಶಿಸ್ತು ಮತ್ತು ಜಾಗೃತಿ ಅತ್ಯಗತ್ಯ” ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ  ತಿಳಿಸಿದರು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಸಾರಿಗೆ ಇಲಾಖೆಯು ಬೆಂಗಳೂರು ಸಂಚಾರ ಪೊಲೀಸ್ ಸಹಯೋಗದೊಂದಿಗೆ ಆಯೋಜಿಸಿದ್ದ “ನಮ್ಮ ರಸ್ತೆ ನಮ್ಮ ಸುರಕ್ಷತೆ” 5ಕೆ ‘ಸೇಫ್ ಎ ಥಾನ್’ (Safe-a-thon) ವಾಕಿಂಗ್, ರನ್ನಿಂಗ್, ಸೈಕ್ಲಿಂಗ್ ಹಾಗೂ ಬೈಕಿಂಗ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,”ಬೆಂಗಳೂರಿನಂತಹ ಮಹಾ ನಗರದಲ್ಲಿ ಬಹುತೇಕ ಅಪಘಾತಗಳು ಅವಸರ ಮತ್ತು ಗಡಿಬಿಡಿಯಿಂದಲೇ ಸಂಭವಿಸುತ್ತವೆ. ಮನೆಯಿಂದ ನಿಗದಿತ ಸಮಯಕ್ಕಿಂತ ಹತ್ತು ನಿಮಿಷ ಬೇಗ ಹೊರಟರೆ ರಸ್ತೆಯಲ್ಲಿನ ಒತ್ತಡ ಕಡಿಮೆಯಾಗುತ್ತದೆ. ಅವಸರದಲ್ಲಿ ವಾಹನ ಚಾಲನೆ ಮಾಡುವುದು ಮನಸ್ಸಿನ ಮೇಲೆ ಒತ್ತಡ ಉಂಟುಮಾಡಿ, ವಿವಿಧ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಅಪಘಾತ ಸಂಭವಿಸಿದಾಗ ಬೇರೆಯವರನ್ನು ದೂಷಿಸುವ ಬದಲು ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು,” ಎಂದು ಸಚಿವರು ಕಿವಿಮಾತು ಹೇಳಿದರು.

ಜೀವ ಉಳಿಸುವ ಜವಾಬ್ದಾರಿ:

ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಆಯುಕ್ತ ಯೋಗೀಶ್ ಎ.ಎಂ, “ರಸ್ತೆ ಸುರಕ್ಷತೆಯು ಕೇವಲ ನಿಯಮ ಪಾಲನೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಅಮೂಲ್ಯ ಜೀವವನ್ನು ಉಳಿಸುವ ಮಹತ್ತರ ಜವಾಬ್ದಾರಿ. ನಾವು ತೋರುವ ಅಲ್ಪ ಸಂಯಮವು ನಮ್ಮ ಕುಟುಂಬದ ಭವಿಷ್ಯದ ಜೊತೆಗೆ ಇತರರ ಪ್ರಾಣವನ್ನೂ ರಕ್ಷಿಸುತ್ತದೆ. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತ ರಹಿತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು,” ಎಂದರು.

ಮೊಬೈಲ್ ಬಳಕೆ ಬಗ್ಗೆ ಎಚ್ಚರಿಕೆ: ಮಾಜಿ ಕ್ರಿಕೆಟಿಗ ಸುನಿಲ್ ಜೋಷಿ  ಮಾತನಾಡಿ, ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವ ಅಭ್ಯಾಸವು ಚಾಲಕರಿಗೆ ಮಾತ್ರವಲ್ಲದೆ ರಸ್ತೆಯಲ್ಲಿ ಸಂಚರಿಸುವ ಇತರರಿಗೂ ಅಪಾಯಕಾರಿ. ತುರ್ತು ಕರೆಗಳಿದ್ದಲ್ಲಿ ವಾಹನವನ್ನು ಪಕ್ಕಕ್ಕೆ ನಿಲ್ಲಿಸಿ ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.

ಪೊಲೀಸ್ ಆಯುಕ್ತರ ಕಳಕಳಿ: ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, “ಅತಿ ವೇಗ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಯೇ ಅಪಘಾತಗಳಿಗೆ ಪ್ರಮುಖ ಕಾರಣ. ಬೆಂಗಳೂರಿನಲ್ಲಿ ಒನ್-ವೇ ಉಲ್ಲಂಘನೆ ಹಾಗೂ ಅಜಾಗರೂಕ ಚಾಲನೆ ತಡೆಯಲು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ,” ಎಂದರು.

ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಯುವಜನರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಈ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ರಸ್ತೆ ಸುರಕ್ಷತೆಯ ಬಗ್ಗೆ ಪ್ರತಿಜ್ಞೆ ಮಾಡಿದರು.

 


Share this with Friends

Related Post