Sun. Mar 8th, 2026

ಪ್ರಿಯಾಂಕ್ ಖರ್ಗೆ ರಾಜ್ಯದ ಭವಿಷ್ಯದ ನಾಯಕ: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶಂಸೆ

Share this with Friends

ಕಲಬುರ್ಗಿ: “ಕಲಬುರ್ಗಿಯ ಜನತೆ ನಾಡಿಗೆ ಪ್ರಿಯಾಂಕ್ ಖರ್ಗೆ ಅವರ ರೂಪದಲ್ಲಿ ಒಬ್ಬ ಸಮರ್ಥ ಭವಿಷ್ಯದ ನಾಯಕನನ್ನು ನೀಡಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದರು.

ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು,ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು, “ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಪ್ರಿಯಾಂಕ್ ಅವರು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಇಲಾಖೆಯ ಜವಾಬ್ದಾರಿ ನೀಡಿದರೂ, ಅವರು ಅದನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದ ಅಭಿವೃದ್ಧಿಗೆ ನ್ಯಾಯ ಒದಗಿಸುತ್ತಿದ್ದಾರೆ. ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಅವರ ಗುಣ ಮೆಚ್ಚುವಂತದ್ದು,” ಎಂದರು.

ಖರ್ಗೆ ಕುಟುಂಬಕ್ಕೆ ಆಶೀರ್ವದಿಸಿ:

“ಕನಕಪುರದ ಜನರು ನನ್ನ ಮೇಲೆ ಹೇಗೆ ವಿಶ್ವಾಸವಿಟ್ಟು ಆಶೀರ್ವದಿಸಿದ್ದಾರೋ, ಅದೇ ರೀತಿ ಕಲಬುರ್ಗಿಯ ಜನತೆ ಪ್ರಿಯಾಂಕ್ ಖರ್ಗೆ ಹಾಗೂ ರಾಧಾಕೃಷ್ಣ ದೊಡ್ಡಮನಿ ಅವರ ಬೆನ್ನಿಗೆ ನಿಲ್ಲಬೇಕು. ಖರ್ಗೆ ಕುಟುಂಬದ ಜೊತೆ ಸದಾ ಇರಬೇಕು,” ಎಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿದರು.

ಕಲ್ಯಾಣ ಕರ್ನಾಟಕಕ್ಕೆ ಖರ್ಗೆ ಕೊಡುಗೆ ಅಪಾರ:

ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗಕ್ಕೆ ನೀಡಿದ ನೀರಾವರಿ ಕೊಡುಗೆಗಳನ್ನು ಸ್ಮರಿಸಿದ ಡಿಸಿಎಂ, “ಅವರು ನೀರಾವರಿ ಸಚಿವರಾಗಿದ್ದ ಕಾಲದಲ್ಲಿ ನಿರ್ಮಿಸಿದ ಚೆಕ್ ಡ್ಯಾಂಗಳಿಂದಾಗಿ ಇಂದು ಅಂತರ್ಜಲ ಮಟ್ಟ ಸುಧಾರಿಸಿದೆ. ಅಂದು ಸಾವಿರಾರು ಅಡಿ ಕೆಳಗೆ ಹೋಗಿದ್ದ ನೀರು ಇಂದು 300-400 ಅಡಿಗಳಲ್ಲೇ ಲಭ್ಯವಾಗುತ್ತಿದೆ. ಕಲ್ಯಾಣ ಕರ್ನಾಟಕದ ಜನರ ಬದುಕಿನಲ್ಲಿ ಖರ್ಗೆ ಅವರ ಕೆಲಸಗಳು ಚಿರಸ್ಥಾಯಿಯಾಗಿವೆ,” ಎಂದು ತಿಳಿಸಿದರು.

ನೀರಾವರಿ ಮತ್ತು ಗ್ಯಾರಂಟಿ ಯೋಜನೆಗಳು:

ಕೃಷ್ಣಾ ಮೇಲ್ದಂಡೆ ಯೋಜನೆ-3ರ ಬಗ್ಗೆ ಮಾಹಿತಿ ನೀಡಿದ ಅವರು, “ಯೋಜನೆಯ ಭೂಸ್ವಾಧೀನಕ್ಕಾಗಿ ಪ್ರತಿ ಎಕರೆಗೆ 35 ರಿಂದ 40 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ನೆರೆಯ ರಾಜ್ಯಗಳ ಅಡೆತಡೆಗಳ ನಡುವೆಯೂ ನಮ್ಮ ನೀರು ನಮ್ಮ ಹಕ್ಕು ಎಂಬ ಧ್ಯೇಯದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಇದರೊಂದಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕು ಹಸನಾಗುತ್ತಿದೆ. ರೈತರ ಪಂಪ್ ಸೆಟ್‌ಗಳ ಉಚಿತ ವಿದ್ಯುತ್‌ಗಾಗಿ ಸರ್ಕಾರ 20 ಸಾವಿರ ಕೋಟಿ ರೂ. ವ್ಯಯಿಸುತ್ತಿದೆ,” ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಸತತ ಶ್ರಮದಿಂದ ಮಾತ್ರ ಸಾಧನೆ ಸಾಧ್ಯ: 

“ಸಾಧನೆ ಎಂಬುದು ತನ್ನಷ್ಟಕ್ಕೆ ತಾನೇ ಒಲಿದು ಬರುವುದಿಲ್ಲ. ಅದರ ಹಿಂದೆ ಕಠಿಣ ಶ್ರಮ, ಛಲ ಮತ್ತು ಜನರ ಬದುಕನ್ನು ಬದಲಿಸಬೇಕೆಂಬ ಹಠವಿರಬೇಕು,” ಎಂದು ಉಪಮುಖ್ಯಮಂತ್ರಿ ಡಿ.ಕೆ.  “ಯಾರು ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಾರೋ ಅವರು ನಿಜವಾದ ನಾಯಕರು. ಮಲ್ಲಿಕಾರ್ಜುನ ಖರ್ಗೆ ಅವರು 371 (ಜೆ) ವಿಧಿ ಜಾರಿಗೆ ತರುವ ಮೂಲಕ ಈ ಭಾಗದ ಯುವಜನತೆಯ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಅವರ ಈ ಐತಿಹಾಸಿಕ ನಡೆಯಿಂದಾಗಿ ಕಲ್ಯಾಣ ಕರ್ನಾಟಕದ ಚಿತ್ರಣವೇ ಬದಲಾಗಿದೆ,”.”ಕಲ್ಯಾಣ ಕರ್ನಾಟಕದ ಜನತೆ ಖರ್ಗೆ ಅವರ ಋಣವನ್ನು ಮರೆತಿಲ್ಲ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಈ ಭಾಗದ ಸಂಸತ್ ಸದಸ್ಯರನ್ನು ಗೆಲ್ಲಿಸುವ ಮೂಲಕ ಜನತೆ ಅವರಿಗೆ ಪ್ರೀತಿಯ ಋಣ ಸಂದಾಯ ಮಾಡಿದ್ದಾರೆ,” ಎಂದು ಶಿವಕುಮಾರ್ ಅವರು ನುಡಿದರು


Share this with Friends

Related Post