ಮೈಸೂರು: “ಮೈಸೂರು ನಗರದ ಅಂದ ಮತ್ತು ಚಂದ ಅದರ ಸ್ವಚ್ಛತೆಯಲ್ಲಿದೆ. ಈ ಹಿಂದೆ ಹಲವು ಬಾರಿ ದೇಶಕ್ಕೇ ಮಾದರಿಯಾಗಿದ್ದ ಮೈಸೂರು, ಮುಂಬರುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮತ್ತೆ ನಂಬರ್ ಒನ್ ಸ್ಥಾನಕ್ಕೇರಲು ಸಾರ್ವಜನಿಕರು ಆಂದೋಲನದ ರೀತಿಯಲ್ಲಿ ಕೆಲಸ ಮಾಡಬೇಕು” ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಕರೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ವತಿಯಿಂದ ಭಾನುವಾರ ಆಯೋಜಿಸಿದ್ದ ಬೃಹತ್ ‘ಸ್ವಚ್ಛತಾ ರೋಡ್ ಶೋ’ ಹಾಗೂ ಜಾಗೃತಿ ಜಾಥಾಗೆ ಅರಮನೆ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು,ನಗರದ ಸ್ವಚ್ಛತೆ ಎನ್ನುವುದು ಕೇವಲ ಪೌರಕಾರ್ಮಿಕರಿಗೆ ಸೀಮಿತವಾದ ಕೆಲಸವಲ್ಲ. ಮನೆಯಲ್ಲಿ ಕಸದ ವಿಂಗಡಣೆ ಮಾಡುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕದಿರುವುದು ಪ್ರತಿಯೊಬ್ಬ ನಾಗರಿಕನ ಆದ್ಯತೆಯಾಗಬೇಕು. “ನಮ್ಮ ನಗರ-ನಮ್ಮ ಹೆಮ್ಮೆ” ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ಮಾತ್ರ ಮೈಸೂರು ಕಸಮುಕ್ತವಾಗಲು ಸಾಧ್ಯ. ಪಾಲಿಕೆಯ ಸಿಬ್ಬಂದಿಗಳ ಜೊತೆ ಕೈಜೋಡಿಸಿ, ಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟದ ಸ್ವಚ್ಛ ನಗರವನ್ನಾಗಿ ಮಾಡೋಣ ಎಂದು ಆಶಯ ವ್ಯಕ್ತಪಡಿಸಿದರು.
ಜಾಥಾದ ಹಾದಿ ಹಾಗೂ ವೈಭವ:
ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಆರಂಭವಾದ ಈ ಬೃಹತ್ ಜಾಥಾವು ಕೆ.ಆರ್. ವೃತ್ತ, ಸಯ್ಯಾಜಿ ರಾವ್ ರಸ್ತೆ ಮೂಲಕ ಸಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತ್ಯಗೊಂಡಿತು. ಹಾದಿಯುದ್ದಕ್ಕೂ ‘ಸ್ವಚ್ಛ ಮೈಸೂರು-ಸುಂದರ ಮೈಸೂರು’ ಎಂಬ ಘೋಷಣೆಗಳು ಮೊಳಗಿದವು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಕೈಯಲ್ಲಿ ಸ್ವಚ್ಛತೆಯ ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಿದರು.
ರಾಯಭಾರಿಗಳ ಸಾಥ್:
ಅಯೋಧ್ಯೆಯ ಬಾಲರಾಮನ ವಿಗ್ರಹ ಕೆತ್ತಿದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ಗಾಯಕಿ ಅನನ್ಯಾ ಭಟ್, ಗಾಯಕ ಸೂರಜ್ ಸಿಂಗ್, ಅಲೋಕ್ ಮತ್ತು ಜಸ್ಕರಣ್ ಸಿಂಗ್ ಅವರ ಉಪಸ್ಥಿತಿಯು ಯುವಜನತೆಯಲ್ಲಿ ಹೆಚ್ಚಿನ ಉತ್ಸಾಹ ತುಂಬಿತು. ತಾರಾ ರಾಯಭಾರಿಗಳು ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕುತ್ತಾ, ಸ್ವಚ್ಛತೆಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಿದರು.
ಆಕರ್ಷಕ ಕಾರು ಜಾಥಾಗೆ ಸಾರ್ವಜನಿಕರು ಫಿದಾ!
ಸಾಂಸ್ಕೃತಿಕ ನಗರಿಯನ್ನು ಕಸಮುಕ್ತಗೊಳಿಸುವ ಸಂಕಲ್ಪದೊಂದಿಗೆ ಆಯೋಜಿಸಿದ್ದ ‘ಸ್ವಚ್ಛತಾ ರೋಡ್ ಶೋ’ ಕೇವಲ ಪಾದಯಾತ್ರೆಗೆ ಸೀಮಿತವಾಗದೆ, ನೂರಾರು ವಾಹನಗಳ ಆಕರ್ಷಕ ಮೆರವಣಿಗೆಯ ಮೂಲಕ ಗಮನ ಸೆಳೆಯಿತು.ಅರಮನೆ ಆವರಣದಿಂದ ಆರಂಭವಾದ ಜಾಥಾದಲ್ಲಿ ಸ್ವಚ್ಛತೆಯ ಸಂದೇಶ ಸಾರುವ ಪೋಸ್ಟರ್‌ಗಳನ್ನು ಧರಿಸಿದ್ದ ನೂರಾರು ಕಾರುಗಳು ಸಾಲಾಗಿ ಸಾಗಿದ್ದು ವಿಶೇಷವಾಗಿತ್ತು. ವಿವಿಧ ಕಾರ್ ಕ್ಲಬ್‌ಗಳ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ನಗರದ ಸೌಂದರ್ಯ ಕಾಪಾಡುವಂತೆ ಮನವಿ ಮಾಡಿದರು.
ಪಾಲಿಕೆ ವಾಹನಗಳ ಪ್ರದರ್ಶನ: ಕಸ ವಿಲೇವಾರಿಗೆ ಬಳಸುವ ಹೊಸ ಮಾದರಿಯ ಟಿಪ್ಪರ್ ಲಾರಿಗಳು, ಆಟೋಗಳು ಮತ್ತು ಕಸ ಗುಡಿಸುವ ಆಧುನಿಕ ಯಂತ್ರಗಳನ್ನು (Mechanical Sweepers) ಸಾಲಾಗಿ ನಿಲ್ಲಿಸಿ ಮೆರವಣಿಗೆ ನಡೆಸುವ ಮೂಲಕ ನಗರದ ಸ್ವಚ್ಛತೆಗೆ ಪಾಲಿಕೆಯ ಸಿದ್ಧತೆಯನ್ನು ಪ್ರದರ್ಶಿಸಲಾಯಿತು.
ಬೈಕ್ ರ್ಯಾಲಿ: ಯುವಜನತೆ ಮತ್ತು ಸ್ವಯಂಸೇವಕರು ದೊಡ್ಡ ಸಂಖ್ಯೆಯಲ್ಲಿ ಬೈಕ್‌ಗಳ ಮೂಲಕ ಜಾಥಾದಲ್ಲಿ ಪಾಲ್ಗೊಂಡು “ಪ್ಲಾಸ್ಟಿಕ್ ಮುಕ್ತ ಮೈಸೂರು” ಎಂಬ ಘೋಷಣೆಗಳನ್ನು ಕೂಗಿದರು.
ಸೈಕಲ್ ಜಾಥಾ: ಪರಿಸರ ಸ್ನೇಹಿ ಸಂದೇಶ ಸಾರಲು ನೂರಾರು ಸೈಕಲ್ ಸವಾರರು ಗಣ್ಯರೊಂದಿಗೆ ಹೆಜ್ಜೆ ಹಾಕಿದರು.
ಜಾನಪದ ಕಲಾತಂಡಗಳು: ಮೆರವಣಿಗೆಯ ಮುಂಭಾಗದಲ್ಲಿ ವೀಣಾ ವಾದನ, ಡೊಳ್ಳು ಕುಣಿತ ಮತ್ತು ವೀರಗಾಸೆ ತಂಡಗಳು ಕಲಾರಂಗನ್ನು ಪ್ರದರ್ಶಿಸುವ ಮೂಲಕ ಸಾಂಸ್ಕೃತಿಕ ಮೆರುಗು ನೀಡಿದವು.
ಈ ಎಲ್ಲ ವಾಹನ ಜಾಥಾಗಳು ಮತ್ತು ಕಲಾತಂಡಗಳು ಅರಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದವು.

