ನವದೆಹಲಿ: “ನಾನು ದೆಹಲಿಯಲ್ಲಿ ಯಾರನ್ನು ಭೇಟಿ ಮಾಡುತ್ತೇನೆ ಎಂಬುದು ಗೌಪ್ಯ, ಅದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಾಯಕರ ಭೇಟಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಚತುರತೆಯಿಂದ ಉತ್ತರಿಸಿದರು. “ನಾನು ದೆಹಲಿಗೆ ಬಂದಾಗಲೆಲ್ಲಾ ನಾಯಕರು ಸಮಯ ನೀಡಿಲ್ಲ ಎಂದು ನೀವು ವರದಿ ಮಾಡುತ್ತೀರಿ. ಈಗಲೂ ನಾನು ನಾಯಕರ ಭೇಟಿಗಾಗಿ ಕಾಯುತ್ತಾ ಕೂತಿದ್ದೇನೆ” ಎಂದು ಲೇವಡಿ ಮಾಡಿದರು.
ಆರು ವರ್ಷಗಳ ಸಾರ್ಥಕ ಹಾದಿ:
ನಾಳೆ (ಮಾರ್ಚ್ 10) ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಆರು ವರ್ಷಗಳು ತುಂಬಲಿವೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಅವರು ಭೋಜನಕೂಟ ಹಮ್ಮಿಕೊಂಡ ಬಗ್ಗೆ ಮಾಹಿತಿ ನೀಡಿದ ಡಿಸಿಎಂ. “ಅಧಿವೇಶನ ನಡೆಯುತ್ತಿರುವುದರಿಂದ ಈಗ ಶಾಸಕರಿಗೆ ಔತಣ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪರಾಜಿತ ಅಭ್ಯರ್ಥಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಪ್ರತ್ಯೇಕ ಭೋಜನಕೂಟ ಏರ್ಪಡಿಸಲಾಗುವುದು” ಎಂದರು.
ಚುನಾವಣಾ ತಯಾರಿ:
ತಮ್ಮ ಭೇಟಿಯು ಕೇವಲ ರಾಜಕೀಯವಲ್ಲ, ಖಾಸಗಿ ಕಾರ್ಯಕ್ರಮವನ್ನೂ ಒಳಗೊಂಡಿದೆ ಎಂದು ಸ್ಪಷ್ಟಪಡಿಸಿದ ಅವರು, ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿರುವುದಾಗಿ ತಿಳಿಸಿದರು. ಅಸ್ಸಾಂ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಸ್ಕ್ರೀನಿಂಗ್ ಕಮಿಟಿ ಸಭೆಗಳ ಬಗ್ಗೆಯೂ ಮಾಹಿತಿ ನೀಡಿದರು.
ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಯಲಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.

