Mon. Mar 9th, 2026

ಹೆಣ್ಣು ಭ್ರೂಣ ಹತ್ಯೆ ತಡೆಗೆ ಸರ್ಕಾರ ಮಾಸ್ಟರ್ ಪ್ಲಾನ್: ಇನ್ಮುಂದೆ 10ನೇ ವಾರಕ್ಕೇ ಗರ್ಭಿಣಿಯರ ನೋಂದಣಿ ಕಡ್ಡಾಯ

Share this with Friends

ಬೆಂಗಳೂರು: ರಾಜ್ಯದಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ಎಂಬ ಸಾಮಾಜಿಕ ಪಿಡುಗನ್ನು ಬೇರುಸಹಿತ ಕಿತ್ತೆಸೆಯಲು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಗರ್ಭಿಣಿಯರ ನೋಂದಣಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಇನ್ಮುಂದೆ ಗರ್ಭಧಾರಣೆಯ 10ನೇ ವಾರದಲ್ಲೇ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ 12 ವಾರಗಳ ನಂತರ ನಡೆಯುತ್ತಿದ್ದ ಎಎನ್‌ಸಿ (ANC) ನೋಂದಣಿಯನ್ನು ಈಗ 10ನೇ ವಾರಕ್ಕೆ ಇಳಿಸಲಾಗಿದೆ. ಇದರಿಂದ ಭ್ರೂಣದ ಲಿಂಗ ಪತ್ತೆ ಮಾಡುವ ಮುನ್ನವೇ ಸರ್ಕಾರಕ್ಕೆ ಮಾಹಿತಿ ಲಭ್ಯವಾಗಿ, ಭ್ರೂಣ ಹತ್ಯೆ ತಡೆಯಲು ಸಹಕಾರಿಯಾಗಲಿದೆ ಎಂದರು.

ಕಣ್ಗಾವಲಿನಲ್ಲಿ ಸ್ಕ್ಯಾನಿಂಗ್ ಕೇಂದ್ರಗಳು: ರಾಜ್ಯದ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳು ‘ಬಾಲಿಕಾ ಸಾಫ್ಟ್‌ವೇರ್’ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನಿಯಮ ಉಲ್ಲಂಘಿಸಿದ 80 ಕೇಂದ್ರಗಳಿಗೆ ದಂಡ ವಿಧಿಸಲಾಗಿದ್ದು, 70 ಪ್ರಕರಣಗಳು ನ್ಯಾಯಾಲಯದಲ್ಲಿವೆ ಎಂದರು.

ವೈದ್ಯರ ಮೇಲೆ FIR: ಲಿಂಗ ಪತ್ತೆ ದಂದೆಯಲ್ಲಿ ಭಾಗಿಯಾದ 3 ವೈದ್ಯರು ಹಾಗೂ 5 ನರ್ಸ್‌ಗಳ ಮೇಲೆ ಈಗಾಗಲೇ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ನೋಡಲ್ ಅಧಿಕಾರಿಗಳ ನೇಮಕ: ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಯಲ್ಲೂ ಹಿರಿಯ ವೈದ್ಯರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಹೆಚ್ಚಿನ ಸ್ಕ್ಯಾನಿಂಗ್ ಕೇಂದ್ರಗಳಿರುವ ಬೆಂಗಳೂರಿನಲ್ಲಿ ಐವರು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಮಾಹಿತಿ ನೀಡಿದರೆ 1 ಲಕ್ಷ ರೂ. ಬಹುಮಾನ: ಅಕ್ರಮವಾಗಿ ಲಿಂಗ ಪತ್ತೆ ಮಾಡುವವರ ಬಗ್ಗೆ ಖಚಿತ ಮಾಹಿತಿ ನೀಡುವವರಿಗೆ ಸರ್ಕಾರ 1 ಲಕ್ಷ ರೂ. ಬಹುಮಾನ ಘೋಷಿಸಿದೆ. ಈಗಾಗಲೇ ಮೂವರು ಸಾರ್ವಜನಿಕರು ಮಾಹಿತಿ ನೀಡಿ ಬಹುಮಾನ ಪಡೆದಿದ್ದಾರೆ ಎಂದರು.

“ಲಿಂಗ ಪತ್ತೆ ಕೇವಲ ಕಾನೂನಿನಿಂದ ತಡೆಯಲು ಸಾಧ್ಯವಿಲ್ಲ. ಗಂಡು ಮಗುವೇ ಬೇಕೆಂಬ ಸಾಮಾಜಿಕ ಮನಸ್ಥಿತಿ ಬದಲಾಗಬೇಕು. ಭಾಗ್ಯಲಕ್ಷ್ಮಿ ಬಾಂಡ್, ಗೃಹಲಕ್ಷ್ಮಿಯಂತಹ ಯೋಜನೆಗಳ ಮೂಲಕ ಹೆಣ್ಣು ಮಕ್ಕಳ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿಸಲು ಸರ್ಕಾರ ಶ್ರಮಿಸುತ್ತಿದೆ” ಎಂದು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ತಿಳಿಸಿದರು.


Share this with Friends

Related Post