ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ (LPG) ಪೂರೈಕೆಯಲ್ಲಿ ದಿಢೀರ್ ವ್ಯತ್ಯಯ ಉಂಟಾಗಿದ್ದು, ಪರಿಸ್ಥಿತಿ ಹೀಗೇ ಮುಂದುವರಿದರೆ ನಾಳೆಯಿಂದ (ಮಾರ್ಚ್ 10) ನಗರದ ಸಾವಿರಾರು ಹೋಟೆಲ್‌ಗಳು ಅನಿರ್ದಿಷ್ಟಾವಧಿಯವರೆಗೆ ಕಾರ್ಯ ಸ್ಥಗಿತಗೊಳಿಸಲಿವೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಘೋಷಿಸಿದೆ.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಹಾಗು ಪಿ.ಸಿ ರಾವ್, ಹೋಟೆಲ್ ಉದ್ಯಮವು ಈಗ ಇತಿಹಾಸದಲ್ಲೇ ಕಾಣದಂತಹ ಇಕ್ಕಟ್ಟಿಗೆ ಸಿಲುಕಿದೆ ಎಂದು ಕಳವಳ ವ್ಯಕ್ತಪಡಿಸಿದರು.ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ‘ಹಾರ್ಮುಜ್ ಜಲಸಂಧಿ’ (Strait of Hormuz) ಬಂದ್ ಆಗಿದೆ. ಭಾರತಕ್ಕೆ ಶೇ. 30ಕ್ಕೂ ಹೆಚ್ಚು ಅನಿಲ ಪೂರೈಕೆಯಾಗುವುದು ಇದೇ ಮಾರ್ಗದಲ್ಲಿ. ಈ ಜಾಗತಿಕ ಸಂಘರ್ಷವು ಬೆಂಗಳೂರಿನ ಹೋಟೆಲ್‌ಗಳ ಒಲೆ ಆರುವಂತೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ಬೇಡಿಕೆಯ ಅರ್ಧದಷ್ಟು ಗ್ಯಾಸ್ ಕೂಡ ಲಭ್ಯವಿಲ್ಲದಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅಗತ್ಯ ಸೇವೆ ಮಾನ್ಯತೆ: ಹೋಟೆಲ್ ಉದ್ಯಮವನ್ನು ‘Essential Services’ (ಅಗತ್ಯ ಸೇವೆ) ಪಟ್ಟಿಗೆ ಸೇರಿಸಬೇಕು. ಇದರಿಂದ ಗ್ಯಾಸ್ ಪೂರೈಕೆಯಲ್ಲಿ ಆದ್ಯತೆ ಸಿಗಲಿದೆ ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ.
ಟೇಬಲ್ ಚಾರ್ಜ್ ಅನಿವಾರ್ಯ?: ಹೋಟೆಲ್‌ಗಳಿಗೆ ಬಂದು ಗಂಟೆಗಟ್ಟಲೆ ಕೂತು ಚರ್ಚಿಸುವವರಿಂದ ‘ಟೇಬಲ್ ಚಾರ್ಜ್’ (₹500 – ₹1000) ವಸೂಲಿ ಮಾಡುವ ಕಟ್ಟುನಿಟ್ಟಿನ ಕ್ರಮದ ಬಗ್ಗೆ ಸಂಘವು ಚರ್ಚಿಸಿದೆ. ಇದು ಅನಗತ್ಯ ಜನದಟ್ಟಣೆ ಕಡಿಮೆ ಮಾಡಲು ಸಹಕಾರಿ ಎಂಬುದು ಅವರ ವಾದವಾಗಿದ್ದು ಸಧ್ಯಕ್ಕೆ ಈ ವಿಚಾರದಲ್ಲಿ ಷರತ್ತು ವಿಧಿಸಿಲ್ಲ ಎಂದರು
ಸರ್ಕಾರಕ್ಕೆ ಗಡುವು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೈಲ ಕಂಪನಿಗಳೊಂದಿಗೆ ಮಾತುಕತೆ ನಡೆಸಿ, ಕನಿಷ್ಠ ಮಟ್ಟದ ಪೂರೈಕೆಯನ್ನಾದರೂ ಖಚಿತಪಡಿಸಬೇಕು ಎಂದು ಗಡುವು ನೀಡಲಾಗಿದೆ ಎಂದರು.
ಜನಸಾಮಾನ್ಯರ ಮೇಲೆ ಪರಿಣಾಮ:
ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಹೋಟೆಲ್ ಆಹಾರವನ್ನೇ ನಂಬಿದ್ದಾರೆ. ಬಂದ್ ನಿರ್ಧಾರ ಜಾರಿಯಾದರೆ ನಗರದ ಆಹಾರ ಭದ್ರತೆಗೆ ದೊಡ್ಡ ಹೊಡೆತ ಬೀಳಲಿದೆ.
“ಗ್ಯಾಸ್ ಸಿಲಿಂಡರ್ ಸಿಗದೆ ನಾವು ಹೋಟೆಲ್ ನಡೆಸಲು ಸಾಧ್ಯವಿಲ್ಲ. ನಾವು ಇಷ್ಟಪಟ್ಟು ಬಂದ್ ಮಾಡುತ್ತಿಲ್ಲ, ಅನಿವಾರ್ಯತೆಯಿಂದ ಮಾಡುತ್ತಿದ್ದೇವೆ,” ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

