Mon. Mar 9th, 2026

ಶುದ್ಧೀಕರಿಸದ ಮಲೀನ ನೀರು ಪೂರೈಸಿ ಜನರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ: ದೇವೇಗೌಡರ ಕಳವಳ

Share this with Friends

ನವದೆಹಲಿ: ಎತ್ತಿನಹೊಳೆ ಯೋಜನೆಯ ವೈಫಲ್ಯವನ್ನು ಮರೆಮಾಚಲು ರಾಜ್ಯ ಸರ್ಕಾರವು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ಸಂಸ್ಕರಿಸದ ಕೊಳಚೆ ನೀರನ್ನು ಹರಿಸುವ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಗಂಭೀರ ಆರೋಪ ಮಾಡಿದರು.

ಸೋಮವಾರ ರಾಜ್ಯಸಭೆಯಲ್ಲಿ ಬಜೆಟ್ ಅಧಿವೇಶನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,”ಯಾವ ಜಿಲ್ಲೆಗಳಿಗೆ ಎತ್ತಿನಹೊಳೆ ಮೂಲಕ ಕುಡಿಯುವ ನೀರು ನೀಡಬೇಕಿತ್ತೋ, ಅಲ್ಲಿಗೆ ಈಗ ಬೆಂಗಳೂರಿನ ಮಲೀನ ನೀರನ್ನು ಹರಿಸಲಾಗುತ್ತಿದೆ. ಮೂರು ಹಂತಗಳಲ್ಲಿ ಸಮರ್ಪಕವಾಗಿ ಶುದ್ಧೀಕರಿಸದ ಈ ನೀರು ಮಾನವ ಬಳಕೆಗೆ ತೀರಾ ಅಪಾಯಕಾರಿ. ಇದರಿಂದ ಆ ಭಾಗದಲ್ಲಿ ಬೆಳೆಯುವ ತರಕಾರಿ ಮತ್ತು ಇತರ ಬೆಳೆಗಳು ವಿಷಕಾರಿಯಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ವನ್ಯಜೀವಿ ಸಂಘರ್ಷಕ್ಕೆ ಮುಕ್ತಿ ಇಲ್ಲ:

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷದ ಕುರಿತು ಮಾತನಾಡಿದ ಅವರು, “ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ತರೀಕೆರೆ ಭಾಗಗಳಲ್ಲಿ ಜನರು ನಿತ್ಯ ಭಯದಲ್ಲಿ ಬದುಕುತ್ತಿದ್ದಾರೆ. ಆನೆಗಳು ಬೆಳೆ ನಾಶಪಡಿಸುವುದಲ್ಲದೆ, ರೈತರ ಪ್ರಾಣವನ್ನೂ ತೆಗೆಯುತ್ತಿವೆ. ಇದನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ” ಎಂದು ದೂರಿದರು.

ಕೇಂದ್ರದ ಹಸ್ತಕ್ಷೇಪಕ್ಕೆ ಆಗ್ರಹ:

ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ದೇವೇಗೌಡರು, “ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಈ ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಈ ಜಿಲ್ಲೆಗಳ ಜನರು ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ” ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸಲಾಗುತ್ತಿದೆ: 

ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಸಕಾಲಕ್ಕೆ ಜಾರಿಗೊಳಿಸಲು ಸಾಧ್ಯವಾಗದ ಕಾಂಗ್ರೆಸ್ ಸರ್ಕಾರ, ತನ್ನ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದ ವಿರುದ್ಧ ಅನಗತ್ಯ ಅಪಪ್ರಚಾರ ನಡೆಸುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಗುಡುಗಿದ್ದಾರೆ.

ಎತ್ತಿನಹೊಳೆ ಯೋಜನೆಗೆ ಗ್ರಹಣ:

“ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಅಂದು ಕೇವಲ 8,000 ಕೋಟಿ ರೂ. ಅಂದಾಜು ವೆಚ್ಚದಲ್ಲಿದ್ದ ಈ ಯೋಜನೆ, ಇಂದು ಕಾಂಗ್ರೆಸ್ ಸರ್ಕಾರದ ಮಂದಗತಿಯ ಕೆಲಸದಿಂದಾಗಿ 33,000 ಕೋಟಿ ರೂ. ದಾಟಿದೆ. ಇಷ್ಟಾದರೂ ಬಯಲುಸೀಮೆಯ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿಗೆ ಹನಿ ನೀರು ತಲುಪಿಲ್ಲ. ಯೋಜನೆ ನಡೆಯುತ್ತಿರುವ ಹಾಸನ ಜಿಲ್ಲೆಯ ಅರಸೀಕೆರೆಗೂ ನೀರು ಒದಗಿಸಲು ಇವರಿಗೆ ಸಾಧ್ಯವಾಗಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆಯ ಅನುಷ್ಠಾನದಲ್ಲಿ ಪರಿಸರ ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಅಂಶವನ್ನೂ ಅವರು ಪ್ರಸ್ತಾಪಿಸಿದರು.

ಮೇಕೆದಾಟು ವಿಳಂಬಕ್ಕೆ ರಾಜ್ಯವೇ ಹೊಣೆ:

ಮೇಕೆದಾಟು ಯೋಜನೆಯ ಬಗ್ಗೆಯೂ ಮಾತನಾಡಿದ ದೇವೇಗೌಡರು, “ನಾನು ನೀರಾವರಿ ಸಚಿವನಾಗಿ, ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಮೇಕೆದಾಟು ಯೋಜನಾ ಪ್ರದೇಶದ ಭೌಗೋಳಿಕ ಪರಿಸ್ಥಿತಿ ನನಗೆ ಚೆನ್ನಾಗಿ ತಿಳಿದಿದೆ. ಅಲ್ಲಿನ ಆನೆ ಕಾರಿಡಾರ್ ಹಾಗೂ ಅರಣ್ಯ ಸಂಪತ್ತಿನ ರಕ್ಷಣೆಗೆ ಸರ್ಕಾರ ವಿಫಲವಾಗಿದೆ. ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯುವಲ್ಲಿ ಸರ್ಕಾರ ಅಸಹಾಯಕವಾಗಿದೆ” ಎಂದು ದೂರಿದರು.


Share this with Friends

Related Post