Fri. Mar 13th, 2026

ಮಧುರೈ ಏರ್ ಪೋರ್ಟ್ ಗೆ ಅಂತರರಾಷ್ಟ್ರೀಯ ಮಾನ್ಯತೆ: ತಮಿಳುನಾಡಿಗೆ ಬೆಣ್ಣೆ, ನಮಗೆ ಸುಣ್ಣವೆಂದ ಎಂ.ಬಿ. ಪಾಟೀಲ

Share this with Friends

ಬೆಂಗಳೂರು: “ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಧುರೈ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಸ್ಥಾನಮಾನ ನೀಡಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ಮಾತ್ರ ‘ಬೆಣ್ಣೆ-ಸುಣ್ಣ’ದ ತಾರತಮ್ಯ ಮಾಡುತ್ತಿದೆ” ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಗಂಭೀರವಾಗಿ ಆರೋಪಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ನೆರೆರಾಜ್ಯದ ಬೇಡಿಕೆಗಳಿಗೆ ಮಣಿಯುತ್ತಿದೆ. ಆದರೆ, ಉತ್ತರ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಎನಿಸಿರುವ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳ ಉನ್ನತೀಕರಣದ ವಿಷಯದಲ್ಲಿ ಉದಾಸೀನತೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಲಾಭದ ಲೆಕ್ಕಾಚಾರ:

“ಮುಂಬರುವ ತಮಿಳುನಾಡು ಚುನಾವಣೆಯೇ ಕೇಂದ್ರದ ಈ ಹಠಾತ್ ನಿರ್ಧಾರಕ್ಕೆ ಕಾರಣವಾಗಿರಬಹುದು. ಆದರೆ ನಮ್ಮ ರಾಜ್ಯದ ನ್ಯಾಯಯುತ ಬೇಡಿಕೆಗಳ ಬಗ್ಗೆ ಕೇಂದ್ರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ದುರದೃಷ್ಟಕರ. ಹುಬ್ಬಳ್ಳಿ-ಬೆಳಗಾವಿ ನಿಲ್ದಾಣಗಳ ಬಗ್ಗೆ ಕಳೆದ ವರ್ಷವೇ (ಜೂನ್ 24, 2025) ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಆದರೂ ರಾಜ್ಯದ ಪ್ರಸ್ತಾವನೆಯನ್ನು ಮೂಲೆಗುಂಪು ಮಾಡಲಾಗಿದೆ” ಎಂದು ಅವರು ದೂರಿದರು.

ಸಂಸದರಿಗೆ ಸವಾಲು:

ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಸಂಪುಟದಲ್ಲಿರುವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರು ಈಗಲಾದರೂ ಧ್ವನಿ ಎತ್ತಬೇಕು. ಕೇವಲ ರಾಜಕೀಯ ಮಾಡುವುದನ್ನು ಬಿಟ್ಟು, ಹುಬ್ಬಳ್ಳಿ ಅಥವಾ ಬೆಳಗಾವಿ ಪೈಕಿ ಕನಿಷ್ಠ ಒಂದು ನಿಲ್ದಾಣಕ್ಕಾದರೂ ಅಂತರರಾಷ್ಟ್ರೀಯ ಮಾನ್ಯತೆ ತಂದುಕೊಡುವ ಮೂಲಕ ರಾಜ್ಯದ ಹಿತ ಕಾಯಲಿ ಎಂದು ಸಚಿವರು ಸವಾಲು ಹಾಕಿದರು.

 


Share this with Friends

Related Post