Wed. Mar 11th, 2026

ಅಡುಗೆ ಅನಿಲ ಸಮಸ್ಯೆ ತಾತ್ಕಾಲಿಕ; ಕೇಂದ್ರದಿಂದ ಶೀಘ್ರ ಪರಿಹಾರ: ಬಿ.ವೈ. ವಿಜಯೇಂದ್ರ ಭರವಸೆ

Share this with Friends

ಬೆಂಗಳೂರು: ಅನಿರೀಕ್ಷಿತ ಯುದ್ಧದ ಸನ್ನಿವೇಶದಿಂದಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ವಿಧಾನಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೂರೈಕೆ ವ್ಯತ್ಯಯದ ವಾಸ್ತವ ತಿಳಿದಿದ್ದರೂ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದು ಅವರ ‘ಬೌದ್ಧಿಕ ದಿವಾಳಿತನ’ವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ ಬಜೆಟ್ ಮಂಡಿಸಿದ್ದರೂ, ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಫೆಬ್ರವರಿ ತಿಂಗಳ ವೇತನ ನೀಡಲು ಸಾಧ್ಯವಾಗದ ಸ್ಥಿತಿಗೆ ಸರ್ಕಾರ ತಲುಪಿದೆ. ಇದು ರಾಜ್ಯ ದಿವಾಳಿಯತ್ತ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದರು.

ಮೋದಿ ಸರ್ಕಾರದ ಮೇಲೆ ಭರವಸೆ:

ಯುದ್ಧದ ಸಾಧಕ-ಬಾಧಕಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಯಾವುದೇ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕಿದೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ, ಮುಂದಿನ ದಿನಗಳಲ್ಲಿ ಅನಿಲ ಸಮಸ್ಯೆಗೆ ಖಂಡಿತ ಪರಿಹಾರ ಸಿಗಲಿದೆ ಎಂದು ವಿಜಯೇಂದ್ರ ಹೇಳಿದರು.


Share this with Friends

Related Post