ಬೆಂಗಳೂರು: ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ವತಿಯಿಂದ ಮಾರುಕಟ್ಟೆಗೆ ಬರಲಿರುವ ಪ್ರತಿಷ್ಠಿತ ‘ಎ2’ (ದೇಸಿ ತಳಿ) ಹಾಲು ಮತ್ತು ತುಪ್ಪದ ರಾಯಭಾರಿಯಾಗಿ ನಟಿ ಸುಧಾರಾಣಿ ಅವರ ನೇಮಕದ ಸುತ್ತ ಎದ್ದಿದ್ದ ವಿವಾದಕ್ಕೆ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಇಂದು ತೆರೆ ಎಳೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, ರಾಯಭಾರಿ ನೇಮಕದ ಬಗ್ಗೆ ಎದ್ದಿರುವ ಆಕ್ಷೇಪಗಳಿಗೆ ನೇರವಾಗಿಯೇ ಉತ್ತರಿಸಿದ್ದಾರೆ. “ದೇಸಿ ತಳಿಯ ಹಾಲಿನ (A2 Milk) ಉತ್ಪನ್ನವನ್ನು ಸದ್ಯಕ್ಕೆ ನಮ್ಮ ಒಕ್ಕೂಟದಿಂದ ಮಾತ್ರ ಪರಿಚಯಿಸಲಾಗುತ್ತಿದೆ. ಈ ವಿಶಿಷ್ಟ ಉತ್ಪನ್ನದ ಪ್ರಚಾರಕ್ಕಾಗಿ ನಮ್ಮ ಆಡಳಿತ ಮಂಡಳಿಯು ಚರ್ಚಿಸಿ, ನಟಿ ಸುಧಾರಾಣಿ ಅವರೊಂದಿಗೆ ಮಾತುಕತೆ ನಡೆಸಿದೆ. ಇದು ಒಕ್ಕೂಟದ ಹಿತದೃಷ್ಟಿಯಿಂದ ತೆಗೆದುಕೊಂಡ ತೀರ್ಮಾನ,” ಎಂದು ಅವರು ಸ್ಪಷ್ಟಪಡಿಸಿದರು.
ಶೀಘ್ರವೇ ಎ2 ತುಪ್ಪ ಲಭ್ಯ: “ಗುಣಮಟ್ಟದ ಎ2 ತುಪ್ಪವನ್ನು ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ. ಇದಕ್ಕೆ ಪೂರಕವಾಗಿ ರಾಯಭಾರಿಯ ನೇಮಕ ಪ್ರಕ್ರಿಯೆ ನಡೆದಿದೆ,” ಎಂದರು.
ವಿವಾದವೇನು:
ಬಮೂಲ್ Vs ಕೆಎಂಎಫ್: ನಂದಿನಿ ಬ್ರ್ಯಾಂಡ್‌ನಡಿ ಹೊಸ ಕ್ರಾಂತಿ ಮಾಡಲು ಹೊರಟಿರುವ ಬೆಂಗಳೂರು ಹಾಲು ಒಕ್ಕೂಟ (ಬಮೂಲ್), ನಟಿ ಸುಧಾರಾಣಿ ಅವರನ್ನು ರಾಯಭಾರಿಯನ್ನಾಗಿ ನೇಮಿಸಿರುವುದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಮತ್ತು ಬಮೂಲ್ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ವಿವಾದದ ಮೂಲವೇನು?
ಸಾಮಾನ್ಯವಾಗಿ ನಂದಿನಿ ಉತ್ಪನ್ನಗಳಿಗೆ ಕರ್ನಾಟಕ ಹಾಲು ಮಹಾಮಂಡಳವೇ (KMF) ರಾಯಭಾರಿಗಳನ್ನು ನೇಮಿಸುತ್ತದೆ. ಈ ಹಿಂದೆ ಡಾ. ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಮತ್ತು ಪ್ರಸ್ತುತ ಶಿವರಾಜ್‌ಕುಮಾರ್ ಅವರು ಇಡೀ ರಾಜ್ಯದ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿದ್ದಾರೆ. ಆದರೆ, ಕೆಎಂಎಫ್‌ನ ಗಮನಕ್ಕೆ ತರದೆ ಬಮೂಲ್ ಸ್ವತಂತ್ರವಾಗಿ ಸುಧಾರಾಣಿ ಅವರನ್ನು ನೇಮಕ ಮಾಡಿಕೊಂಡಿರುವುದು ಕೆಎಂಎಫ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ಮಹಾಮಂಡಳದ ಬೈಲಾಗೆ ವಿರುದ್ಧವಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

